ಮೈಸೂರು: ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ಇಂದು ನಡೆಸಿದ ಸಭೆಯಿಂದ ಎರಡು ಪಕ್ಷಗಳ ಕಾರ್ಯಕರ್ತರಲ್ಲಿ ಸಮನ್ವಯ ಮೂಡಿದೆ. ಈವರೆಗೆ ಹೋರಾಟದ ಹಾದಿ ತುಳಿದಿದ್ದ ಮೈತ್ರಿ ಪಕ್ಷದ ಕಾರ್ಯಕರ್ತರು ಇದೀಗ ತಮ್ಮ ನಿಲುವು ಬದಲಾಯಿಸಿಕೊಂಡಿದ್ದಾರೆ.
ಅಭ್ಯರ್ಥಿಗಳ ಆಯ್ಕೆಯಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರಲ್ಲಿ ಸಮನ್ವಯದ ಕೊರತೆ ಕಂಡುಬಂದಿತ್ತು. ಇದರಿಂದ ಹೊಂದಾಣಿಕೆಯ ಅಭ್ಯರ್ಥಿ ಪರ ಕೆಲಸ ಮಾಡಲು ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ ಇತ್ತು.
ಆದರೆ, ಕೆ.ಆರ್.ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಹಾಗೂ ಕೆ.ವಿ.ಮಲ್ಲೇಶ್ ಸೇರಿದಂತೆ ಎರಡೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಖಾಸಗಿ ಕಲ್ಯಾಣ ಮಂಟಪವೊಂದರಲ್ಲಿ ಸಭೆ ನಡೆಸಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರನ್ನು ಸೋಲಿಸುವ ಪಣ ತೊಟ್ಟರು.
ನಾಳೆ ಎರಡೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಅವರೊಂದಿಗೆ ಪ್ರಚಾರಕ್ಕೆ ತೆರಳಲಿದ್ದಾರೆ.