ಮೈಸೂರು : ನಾಳೆ ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಮತ ಎಣಿಕೆ ಟೇಬಲ್ಗಳನ್ನು ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ಕೆ 725 ಸಿಬ್ಬಂದಿಯನ್ನು ನೇಮಕ ಮಾಡಲಾಗಿದ್ದು, ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಅವರು ತಿಳಿಸಿದ್ದಾರೆ.
ಇಂದು ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ನಾಳೆ ಬೆಳಗ್ಗೆ 7:30 ಕ್ಕೆ ಭದ್ರತಾ ಕೊಠಡಿಯನ್ನು ಅಭ್ಯರ್ಥಿಗಳು, ಏಜೆಂಟರ ಸಮ್ಮುಖದಲ್ಲಿ ತೆರೆದು 8 ಗಂಟೆಗೆ ಮತ ಎಣಿಕೆ ಆರಂಭ ಮಾಡಲಾಗುತ್ತದೆ. 8:30ರ ವರೆಗೆ ಅಂಚೆ ಮತಗಳನ್ನು ಎಣಿಕೆ ಮಾಡಲಾಗುವುದು. ಪ್ರತಿ ವಿಧಾನಸಭೆಗೂ 14 ಮತ ಎಣಿಕೆ ಟೇಬಲ್ಗಳನ್ನು ವ್ಯವಸ್ಥೆ ಮಾಡಲಾಗಿದೆ. 725 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಎಣಿಕೆ ಕೇಂದ್ರದ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಅನ್ನು ಜಾರಿ ಮಾಡಲಾಗಿದ್ದು, ಮತ ಎಣಿಕೆಯ ಕೇಂದ್ರದ ಒಳಗೆ ಮತ್ತು ಹೊರಗೆ 400 ಪೋಲಿಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಇದರ ಜೊತೆಗೆ ಸಿಐಎಸ್ಎಫ್ ತುಕಡಿಗಳನ್ನು ಹಾಗೂ ಸ್ಥಳೀಯ ಮೀಸಲು ಪಡೆಯನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಕೆ ಆರ್ ನಗರದಲ್ಲಿ ಅತಿ ಹೆಚ್ಚು ಮತದಾನ : ಮೈಸೂರಿನಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ. 330 ಪೋಲಿಂಗ್ ಸ್ಟೇಷನ್ಗಳಲ್ಲಿ 6 ಗಂಟೆಯ ನಂತರವೂ ಸಹ ಮತದಾನ ನಡೆದಿದೆ. ಮೈಸೂರು ಜಿಲ್ಲೆಯಲ್ಲಿ ಒಟ್ಟು 72.12 ರಷ್ಟು ಮತದಾನ ಆಗಿದ್ದರೆ, ಕೆ ಆರ್ ನಗರದಲ್ಲಿ 85.19 ರಷ್ಟು ಮತದಾನ ನಡೆದಿದ್ದು, ಅತಿ ಕಡಿಮೆ ಮೈಸೂರು ನಗರದ ಕೃಷ್ಣ ರಾಜ ಕ್ಷೇತ್ರದಲ್ಲಿ 59.55 ಮತದಾನ ಆಗಿದೆ. ಮತದಾನ ನಡೆದ 30 ದಿನದ ಒಳಗೆ ಅಭ್ಯರ್ಥಿಗಳು ಚುನಾವಣಾ ಖರ್ಚು ವೆಚ್ಚದ ಮಾಹಿತಿಯನ್ನು ನೀಡಬೇಕು. ಇಲ್ಲದಿದ್ದರೆ ಚುನಾವಣೆಯಲ್ಲಿ ಆಯ್ಕೆಯಾದವರು ಅನರ್ಹ ಆಗುವ ಸಾಧ್ಯತೆ ಇದೆ ಎಂದು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಕಂಟ್ರೋಲ್ ಯುನಿಟ್ ಧ್ವಂಸ ಪ್ರಕರಣ.. ಎಫ್ ಐ ಆರ್ ದಾಖಲು: ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಹೂಟಗಳ್ಳಿ ಮತಗಟ್ಟೆಯಲ್ಲಿ ಮತದಾನದ ದಿನ ಮಾನಸಿಕ ಅಸ್ವಸ್ಥನ ರೀತಿಯಲ್ಲಿ ಇದ್ದ ವ್ಯಕ್ತಿಯೊಬ್ಬ, ಮತದಾನ ಮಾಡಲು ಬಂದು ಮತಗಟ್ಟೆಯಲ್ಲಿ ಇದ್ದ ಕಂಟ್ರೋಲ್ ಯುನಿಟ್ ಅನ್ನು ಧ್ವಂಸ ಮಾಡಿದ್ದ. ಈ ಸಂಬಂಧ ತಪ್ಪಿತಸ್ಥ ವ್ಯಕ್ತಿಯ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ. ಆತ ಮಾನಸಿಕ ಅಸ್ವಸ್ಥನೆ ಅಥವಾ ಇಲ್ಲವೇ ಎಂಬ ಬಗ್ಗೆ ವೈದ್ಯಕೀಯ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಮತ ಎಣಿಕೆಗೆ ಹಾವೇರಿ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ