ಮೈಸೂರು : ಜಿಲ್ಲೆಯಲ್ಲಿ ಕಾವೇರಿ ಮತ್ತು ಕಬಿನಿ ಜಲಾಶಯದಿಂದ ನೀರು ಹರಿಸುವ ಸಂಬಂಧ ಕಾವೇರಿ ಮತ್ತು ಕಬಿನಿ ಜಲಾಶಯಗಳ ನೀರಾವರಿ ಸಲಹಾ ಸಮಿತಿ ಸಭೆಯನ್ನು ಆದಷ್ಟು ಬೇಗ ಕರೆಯಲಾಗುವುದು ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಮುಂಗಾರು ಹಂಗಾಮಿಗೆ ಜಿಲ್ಲಾಡಳಿತ ಮಾಡಿಕೊಂಡಿರುವ ಸಿದ್ಧತೆಗಳ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಕೆಆರ್‌ಎಸ್ ಜಲಾಯಶಯ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ವ್ಯಾಪ್ತಿಗೆ ಬರುತ್ತದೆ. ಅವರೊಂದಿಗೆ ಚರ್ಚಿಸಿ, ಕಬಿನಿ ಜಲಾಶಯದ ಸಭೆಯನ್ನು ಸಹ ನಡೆಸಲಾಗುವುದು ಎಂದರು.
ಮೆಕ್ಕೆಜೋಳ ಬೆಳೆದ ರೈತರಿಗೂ ಲಾಕ್‍ಡೌನ್ ಸಂದರ್ಭದಲ್ಲಿ ಸಮಸ್ಯೆ ಉಂಟಾದ ಹಿನ್ನೆಲೆ ರಾಜ್ಯ ಸರ್ಕಾರ 5000 ರೂ.ಗಳ ಪ್ರೋತ್ಸಾಹಧನ ಘೋಷಣೆ ಮಾಡಿದೆ. ಈ ಮೊತ್ತ ಆದಷ್ಟು ಬೇಗ ರೈತರಿಗೆ ತಲುಪುವಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಂಗಾರು ಆರಂಭ ಹಿನ್ನೆಲೆ ರೈತರಿಗೆ ಬಿತ್ತನೆಬೀಜ, ರಸಗೊಬ್ಬರ ಮುಂತಾದವುಗಳು ಕೊರತೆಯಾಗಬಾರದು. ಸಕಾಲಕ್ಕೆ ಬಿತ್ತನೆ ಕಾರ್ಯ ನಡೆಸಲು ಎಲ್ಲಾ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ನೀಡುವ ಪರಿಹಾರ ಇನ್ನೂ ಕೆಲವು ಕುಟುಂಬಂಗಳಿಗೆ ಕೊಡಬೇಕಾಗಿದೆ. ತಕ್ಷಣ ಅವರಿಗೆ ಪರಿಹಾರ ಮೊತ್ತ ಸಿಗಬೇಕು ಎಂದರು.
ರಸಗೊಬ್ಬರ, ಬಿತ್ತನೆ ಬೀಜದ ಕೊರತೆ ಇಲ್ಲ: ಜಿಲ್ಲೆಯಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜದ ಕೊರತೆ ಇಲ್ಲ. ಜಿಲ್ಲೆಗೆ 1,04,900 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ಇದ್ದು, ಈಗಾಗಲೇ 98,920 ಮೆಟ್ರಿಕ್ ಟನ್ ಪೂರೈಕೆಯಾಗಿದೆ. ಈ ಪೈಕಿ 48,079 ಮೆಟ್ರಿಕ್ ಟನ್ ರಸಗೊಬ್ಬರ ವಿತರಣೆ ಮಾಡಲಾಗಿದ್ದು, ಇನ್ನೂ 50,841 ದಾಸ್ತಾನು ಇದೆ ಎಂದರು. ಜಿಲ್ಲೆಗೆ ಒಟ್ಟು 91,831 ಕ್ವಿಂಟಾಲ್ ಬಿತ್ತನೆ ಬೀಜ ಬೇಡಿಕೆ ಇದೆ. ಹಲವಾರು ರೈತರು ತಮ್ಮಲ್ಲೇ ಇರುವ ಬಿತ್ತನೆ ಬೀಜವನ್ನು ಬಳಸುತ್ತಾರೆ. ಈ ಬಿತ್ತನೆ ಬೀಜದ ಬದಲಿ ಅನುಪಾತದ ಪ್ರಕಾರ ಪ್ರಸ್ತುತ ಬೇಡಿಕೆಯನ್ನು 37,692 ಕ್ವಿಂಟಾಲ್ ಎಂದು ಅಂದಾಜಿಸಲಾಗಿದೆ. 39,673 ಕ್ವಿಂಟಾಲ್ ದಾಸ್ತಾನು ಈಗಾಗಲೇ ಇರುವುದರಿಂದ ಯಾವುದೇ ಕೊರತೆ ಇಲ್ಲ ಎಂದರು.
ಜಂಟಿ ಕೃಷಿ ನಿರ್ದೇಶಕರಾದ ಡಾ.ಮಹಂತೇಶಪ್ಪ ಅವರು ಮಾತನಾಡಿ, 2020-21 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾದ ಪ್ರಮುಖ ಬೆಳೆಗಳು ಭತ್ತ, ಜೋಳ, ರಾಗಿ, ಮುಸುಕಿನ ಜೋಳ, ನವಣೆ, ತೊಗರಿ, ಅಲಸಂದೆ, ಉದ್ದು, ಹೆಸರು, ಅವರೆ, ನೆಲಗಡಲೆ ಮುಂತಾದ ಪ್ರಮುಖ ಬೆಳೆಗಳಿಗೆ ಬಿತ್ತನೆ ಬೀಜವನ್ನು ರೈತರಿಗೆ ನೀಡುವುದರ ಜೊತೆಗೆ ಆನ್‍ಲೈನ್ ಮೂಲಕ ತರಬೇತಿಯನ್ನು ನೀಡಲಾಗಿದೆ ಎಂದರು.