ಮೈಸೂರು: ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ರೇಪ್ ಪ್ರಕರಣ ಪೊಲೀಸ್ ಇಲಾಖೆಗೆ ಚಾಲೆಂಜ್ ಆಗಿದೆ. ಕರ್ನಾಟಕ ಪೊಲೀಸ್ ಇಲಾಖೆ ಸಾಕಷ್ಟು ಕ್ಲಿಷ್ಟ ಪ್ರಕರಣಗಳನ್ನ ಭೇದಿಸಿದೆ. ಈ ಪ್ರಕರಣವನ್ನು ಶೀಘ್ರದಲ್ಲಿ ಭೇದಿಸುತ್ತೇವೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಸಂತ್ರಸ್ತೆಯಿಂದ ಯಾವುದೇ ಮಾಹಿತಿ ಸಿಗದೆ, ಸಂತ್ರಸ್ತೆಯ ಸ್ನೇಹಿತನಿಂದ ಮಾಹಿತಿ ಪಡೆದು ಇಲಾಖೆ ವತಿಯಿಂದಲೇ ದೂರು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದರು.
376D, 397 ಕಲಂ ಡಾಕಾಯಿತಿ ಹಾಗೂ ಗ್ಯಾಂಗ್ ರೇಪ್ ಅಡಿ ದೂರು ದಾಖಲು ಮಾಡಿಕೊಳ್ಳಲಾಗಿದೆ. ಗ್ಯಾಂಗ್ ರೇಪ್ ಸಂಬಂಧ ಐದು ಟೀಂ ಮೂಲಕ ಈಗಾಗಲೇ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಇದಕ್ಕಾಗಿಯೇ ಹೊರ ಜಿಲ್ಲೆಗಳಿಂದಲೂ ಸಿಬ್ಬಂದಿ ಕರೆಸಿದ್ದೇವೆ. ಪ್ರಕರಣ ತನಿಖೆ ವರದಿಯನ್ನ ಸರ್ಕಾರಕ್ಕೆ ವರದಿ ಮಾಡಲಾಗುತ್ತಿದೆ ಎಂದು ಹೇಳಿದರು.
ಸಂತ್ರಸ್ತ ಯುವತಿಯ ಸ್ನೇಹಿತನಿಂದಲೂ ಒಂದಷ್ಟು ಮಾಹಿತಿ ಪಡೆಯಲಾಗಿದೆ. ಗ್ಯಾಂಗ್ ರೇಪ್ ಪ್ರಕರಣ ರಾತ್ರಿ 7.30 ರಿಂದ 8: 30 ರ ವೇಳೆಯಲ್ಲಿ ನಡೆದಿದೆ. ಇಂತಹ ಪ್ರಕರಣಗಳು ನಡೆಯಬಾರದು. ಈ ರೀತಿಯ ವಿಚಾರಗಳಲ್ಲಿ ಸಾಕಷ್ಟು ಗೌಪ್ಯತೆಯನ್ನ ಕಾಪಾಡಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಓದಿ: ರಾಜ್ಯದಲ್ಲಿಂದು 1,213 ಮಂದಿಗೆ COVID Positive: 25 ಮಂದಿ ಕೊರೊನಾಕ್ಕೆ ಬಲಿ