ಮೈಸೂರು: ಕ್ಷುಲ್ಲಕ ಕಾರಣಕ್ಕೆ ಒಡಹುಟ್ಟಿದ ತಮ್ಮನನ್ನೇ ಅಣ್ಣನೊಬ್ಬ ಕೊಚ್ಚಿ ಕೊಲೆ ಮಾಡಿರುವ ಘಟನೆ ನಂಜನಗೂಡು ತಾಲೂಕಿನ ಮಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಗೋವಿಂದ ನಾಯಕ (35) ಮೃತಪಟ್ಟಿದ್ದಾನೆ. ಆರೋಪಿ ರಂಗಸ್ವಾಮಿ ಪರಾರಿಯಾಗಿದ್ದಾನೆ.
ಗೋವಿಂದ ನಾಯ್ಕ ಮತ್ತು ರಂಗಸ್ವಾಮಿ ನಡುವೆ ಪದೇ ಪದೆ ಜಾಗದ ವಿಚಾರಕ್ಕೆ ಘರ್ಷಣೆ ನಡೆಯುತ್ತಿತ್ತು. ಶನಿವಾರ ತಡರಾತ್ರಿ ಮನೆಯ ಮುಂಭಾಗದಲ್ಲಿದ್ದ ಶೌಚಾಲಯದ ಕೊಠಡಿಯ ಬೀಗ ಒಡೆದ ಎಂದು ಜಗಳ ತೆಗೆದು ಅಣ್ಣ ಘರ್ಷಣೆಗೆ ಮುಂದಾಗಿದ್ದಾನೆ. ಗೋವಿಂದ ನಾಯ್ಕ ಮತ್ತು ರಂಗಸ್ವಾಮಿ ನಡುವೆ ಮಾತಿನ ಚಕಮಕಿ ನಡೆಯುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಜಗಳ ಬಿಡಿಸಿದ್ದರು.
ತಡರಾತ್ರಿ 11 ಗಂಟೆಯ ಸುಮಾರಿಗೆ ಮನೆಯಲ್ಲಿ ಗೋವಿಂದನಾಯ್ಕ ಮಲಗಿರುವ ಸಂದರ್ಭದಲ್ಲಿ ಮಚ್ಚಿನಿಂದ ರಂಗಸ್ವಾಮಿ ಹಲ್ಲೆ ಮಾಡಿದ್ದಾನೆ. ತಲೆಯ ಭಾಗ ಮತ್ತು ಕುತ್ತಿಗೆಗೆ ತೀವ್ರವಾಗಿ ಗಾಯವಾಗಿ ರಕ್ತದ ಮಡುವಿನಲ್ಲಿ ಬಿದ್ದು ಗೋವಿಂದ ನಾಯಕ ನರಳಾಡುತ್ತಿದ್ದ. ಇದನ್ನು ಕಂಡ ಗ್ರಾಮಸ್ಥರು ದೊಡ್ಡಕವಲಂದೆ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿ ವಿಚಾರ ಮುಟ್ಟಿಸಿದ್ದಾರೆ. ಕೂಡಲೇ ಪಿಎಸ್ಐ ಮಹೇಂದ್ರ ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದಿದ್ದಾರೆ.
ಗೋವಿಂದ ನಾಯಕನನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ಸಾಗಿಸಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗೆ ಶೋಧ ನಡೆಯುತ್ತಿದೆ.
ಇದನ್ನೂ ಓದಿ: ಪೋಕ್ಸೊ ಕಾಯ್ದೆಯಡಿ ಬಂಧಿತ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ