ಮೈಸೂರು: ವಿದ್ಯಾರಣ್ಯಪುರಂ ಚಿನ್ನದಂಗಡಿ ದರೋಡೆ ಪ್ರಕರಣದ ಏಳು ಆರೋಪಿಗಳನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆಗಸ್ಟ್ 23 ರಂದು ನಗರದ ವಿದ್ಯಾರಣ್ಯಪುರಂ ಅಮೃತ್ ಗೋಲ್ಡ್ ಆ್ಯಂಡ್ ಸಿಲ್ವರ್ ಪ್ಯಾಲೇಸ್ಗೆ ನುಗ್ಗಿ ಆರೋಪಿಗಳು ದರೋಡೆ ಮಾಡಿದ್ದರು. ಆ ಸಂದರ್ಭದಲ್ಲಿ ಗುಂಡು ಹಾರಿಸಿ ಅಮಾಯಕನ ಸಾವಿಗೆ ಕಾರಣವಾಗಿದ್ದರು. ದರೋಡೆ ಪ್ರಕರಣವನ್ನು ಭೇದಿಸಿದ್ದ ಪೊಲೀಸರು ಪ್ರಕರಣದಲ್ಲಿ ಏಳು ಆರೋಪಿಗಳನ್ನು ದೇಶದ ನಾನಾ ಭಾಗಗಳಲ್ಲಿ ಬಂಧಿಸಿದ್ದಾರೆ.
![gold-shop-robbery](https://etvbharatimages.akamaized.net/etvbharat/prod-images/kn-mys-06-robberyfollowupphotos-7208092_13092021144346_1309f_1631524426_773.jpg)
ಅದರಲ್ಲಿ ಪ್ರಮುಖ ಆರೋಪಿ 60 ವರ್ಷದ ವೃದ್ಧ ಬಾಂಬೆ ಬುಡ್ಡ ತಲೆಮರೆಸಿಕೊಂಡಿದ್ದಾನೆ. ಉಳಿದ ಏಳು ಆರೋಪಿಗಳನ್ನು 12 ದಿನಗಳ ಕಾಲ ಪೊಲೀಸರು ತಮ್ಮ ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ. ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಬಂಧಿತ ಆರೋಪಿಗಳಾದ ಮಹೇಂದ್ರ, ವಿಜಯ್ ಸೇನಾ, ಮದನ್ ಸಿಂಗ್, ತೌಸಿಪ್, ಸೈಫುದ್ದೀನ್, ಜಹಾಗೀರ್ ಹಾಗೂ ಮಂಜೂರ್ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರು ಆರೋಪಿಗಳಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ಶಿಕ್ಷೆ ವಿಧಿಸಿದ್ದಾರೆ.
ವಿಚಾರಣೆ ವೇಳೆಯಲ್ಲಿ ಸ್ಪೋಟಕ ಮಾಹಿತಿ
ಬಂಧಿತ ಏಳು ಜನ ಆರೋಪಿಗಳು ವಿವಿಧ ಅಪರಾಧ ಹಿನ್ನೆಲೆ ಉಳ್ಳವರಾಗಿದ್ದಾರೆ. ಇವರು ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತನಿಖೆ ವೇಳೆಯಲ್ಲಿ ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ. ಜೊತೆಗೆ ಮೈಸೂರಿನ ಚಿನ್ನದಂಗಡಿ ದರೋಡೆ ಪ್ರಕರಣದಲ್ಲಿ ಸುಪಾರಿ ನೀಡಿದ್ದ ಮಹೇಂದ್ರ ಎಂಬಾತ ಹಲವಾರು ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಹೀಗಾಗಿ, ಮೈಸೂರು ಹಾಗೂ ಬೆಂಗಳೂರು ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿರುವುದು ತನಿಖೆ ವೇಳೆಯಲ್ಲಿ ಗೊತ್ತಾಗಿದೆ.
![gold-shop-robbery](https://etvbharatimages.akamaized.net/etvbharat/prod-images/kn-mys-06-robberyfollowupphotos-7208092_13092021144346_1309f_1631524426_529.jpg)
ಬಾಂಬೆ ಬುಡ್ಡನಿಗಾಗಿ ಮುಂದುವರೆದ ಶೋಧ
ಚಿನ್ನದಂಗಡಿ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಕ್ರಿಮಿನಲ್ ಹಿನ್ನೆಲೆಯುಳ್ಳ 60 ವರ್ಷದ ಬಾಂಬೆ ಬುಡ್ಡನಿಗಾಗಿ ಪತ್ತೆ ಕಾರ್ಯ ಚುರುಕುಗೊಂಡಿದೆ. ಆತನ ಬಂಧನಕ್ಕೆ ಮೈಸೂರಿನ ಪೊಲೀಸ್ ತಂಡ ಮುಂಬೈನಲ್ಲಿ ಬೀಡುಬಿಟ್ಟಿವೆ. ಈತ ದರೋಡೆ ಪ್ರಕರಣದಲ್ಲಿ ಅತಿ ಹೆಚ್ಚು ಚಿನ್ನದ ಆಭರಣಗಳನ್ನು ದೋಚಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಕುಡಿದ ನಶೆಯಲ್ಲಿ ಪಬ್ನಲ್ಲಿ ಬಿಯರ್ ಬಾಟಲಿ ತೂರಾಡಿ ರೆಡಿಯೋ ಜಾಕಿಯ ಸ್ನೇಹಿತರಿಂದ ಗಲಾಟೆ..