ಮೈಸೂರು: ಇತ್ತೀಚೆಗೆ ಹಿರಿಯ ನಾಗರಿಕರನ್ನೇ ಗುರಿಯಾಗಿಸಿಕೊಂಡು ಅಪರಾಧ ಕೃತ್ಯ ಎಸಗುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಗರದಲ್ಲಿನ ವೈದ್ಯ ದಂಪತಿ ಮನೆಗೆ ನುಗ್ಗಿದ ದುಷ್ಕರ್ಮಿ, ಚಾಕುವಿನಿಂದ ಇರಿದು ಮೈ ಮೇಲಿದ್ದ ಒಡವೆ ಕದ್ದು ಪರಾರಿಯಾಗಿದ್ದಾನೆ.
ವಿಜಯನಗರದಲ್ಲಿ ಗುರುವಾರ ರಾತ್ರಿ ಕಳ್ಳತನ, ಕೊಲೆ ಯತ್ನ ನಡೆದಿದ್ದು, ಡಾ. ಕೇಶವ್ ಹಾಗೂ ಡಾ. ಕೃಷ್ಣಕುಮಾರಿ ಹಲ್ಲೆಗೆ ಒಳಗಾದ ದಂಪತಿ. ಸದಾ ವಾಹನ ದಟ್ಟಣೆ ಇರುವ ಮುಖ್ಯರಸ್ತೆಯಲ್ಲೇ ಕೃತ್ಯ ನಡೆದಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ. ಗುರುವಾರ ರಾತ್ರಿ ಮನೆಗೆ ನುಗ್ಗಿದ ಕಳ್ಳ, ಮನೆಯಲ್ಲಿ ಒಂಟಿಯಾಗಿದ್ದ ಡಾ.ಕೃಷ್ಣಕುಮಾರಿ ಅವರ ತಲೆಗೆ ಬಲವಾಗಿ ಹೊಡೆದಿದ್ದಾನೆ. ಅವರು ಧರಿಸಿದ್ದ ಚಿನ್ನದ ಬಳೆ ಕಸಿದುಕೊಂಡಿದ್ದಾನೆ. ಈ ವೇಳೆ ಮನೆಗೆ ಬಂದ ಡಾ.ಕೇಶವ್ ಆತನನ್ನು ತಡೆಯಲು ಯತ್ನಿಸಿದ್ದಾರೆ. ಕೂಡಲೇ ಚಾಕು ತೆಗೆದ ದುಷ್ಕರ್ಮಿ, ಡಾ.ಕೇಶವ್ ಅವರ ದೇಹಕ್ಕೆ ಮನಸೋ ಇಚ್ಛೆ ಇರಿದು ಪರಾರಿಯಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ವೈದ್ಯ ದಂಪತಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಾ.ಕೃಷ್ಣಕುಮಾರಿ ಚೇತರಿಸಿಕೊಂಡಿದ್ದಾರೆ. ಆದ್ರೆ, ಡಾ.ಕೇಶವ್ ಅವರ ಕುತ್ತಿಗೆ, ಎದೆ, ಎರಡೂ ಕೈಗಳಿಗೆ 10ಕ್ಕೂ ಹೆಚ್ಚು ಕಡೆ ಇರಿತದ ಗಾಯಗಳಾಗಿವೆ. ತೀವ್ರ ರಕ್ತಸ್ರಾವ ಆಗಿರುವ ಪರಿಣಾಮ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಓದಿ: ದೇಶದಲ್ಲೇ ಹೆಚ್ಚು ಭೌಗೋಳಿಕ ಸೂಚ್ಯಂಕ ಉತ್ಪನ್ನ ಉತ್ಪಾದಿಸುವ ರಾಜ್ಯ ಕರ್ನಾಟಕ
ವೈದ್ಯ ದಂಪತಿಯ ಕೊಲೆಗೆ ಯತ್ನದ ಬಗ್ಗೆ ಡಿಸಿಪಿ ಡಾ.ಎ.ಎನ್. ಪ್ರಕಾಶಗೌಡ ಮಾಧ್ಯಮದವರೊಂದಿಗೆ ಮಾತನಾಡಿ, ಡಾ.ಕೇಶವ್ ಹಾಗೂ ಡಾ.ಕೃಷ್ಣಕುಮಾರಿ ದಂಪತಿ ದಶಕಗಳಿಂದಲೂ ಮೈಸೂರಿನ ನಿವಾಸಿಗಳು. ತಮ್ಮದೇ ಮಾಲೀಕತ್ವದ ಡಯೋಗ್ನಾಸ್ಟಿಕ್ ಸೆಂಟರ್ ನಡೆಸುತ್ತಿದ್ದಾರೆ. ಮಕ್ಕಳೂ ವೈದ್ಯರಾಗಿದ್ದು, ಬೆಂಗಳೂರು ಹಾಗೂ ವಿದೇಶದಲ್ಲಿ ನೆಲೆಸಿದ್ದಾರೆ. ಆರೋಪಿಗಳು ಇದೆಲ್ಲದರ ಮಾಹಿತಿ ಪಡೆದುಕೊಂಡೇ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದರು.