ಮೈಸೂರು: ಈ ಬಾರಿ ಅಭಿಮನ್ಯು ಚಿನ್ನದ ಅಂಬಾರಿ ಹೊತ್ತಿದ್ದು, ಅದರ ಮಾವುತನಾಗಿ ನಾನು ಕೆಲಸ ನಿರ್ವಹಿಸಿದ್ದು, ಜೀವನದ ದೊಡ್ಡ ಖುಷಿ ಎಂದು ಮಾವುತ ವಸಂತ್ ತಿಳಿಸಿದ್ದಾರೆ.
ಚಿನ್ನದ ಅಂಬಾರಿಯನ್ನು ಹೊತ್ತ ಅಭಿಮನ್ಯುವಿನ ಕುರಿತು ಮಾತನಾಡಿದ ಮಾವುತ ವಸಂತ್, ಅರ್ಜುನನಿಗೆ ಹಳೆಯ ಮಾವುತರು ಅಂಬಾರಿ ಹೊರಿಸಿದ್ದರು. ನಂತರ ಅವರ ಮಕ್ಕಳು ಅದನ್ನು ಅನುಸರಿಸುತ್ತಾ ಬಂದರು. ಆದರೆ, ಇದೀಗ ನಾನೊಬ್ಬನೆ ಅಂಬಾರಿ ಹೊರಿಸುವುದನ್ನು ನೆನೆದು ಮೊದಲಿಗೆ ಸ್ವಲ್ಪ ಹೆದರಿಕೆ ಆಯ್ತು.
ನಮ್ಮ ತಂದೆಯವರು ಈ ಅಭಿಮನ್ಯು ಆನೆಗೆ ಅಂಬಾರಿ ಹೊರಿಸಿದ್ದರೆ ನನಗೆ ಸ್ವಲ್ಪ ಧೈರ್ಯ ಇರುತ್ತಿತ್ತು. ಬೇರೆ ಬೇರೆ ರಾಜ್ಯದಲ್ಲಿ ಕೆಲಸ ಮಾಡಿರುವುದಕ್ಕಿಂತ ದೊಡ್ಡ ಖುಷಿ ಅನಿಸಿದ್ದು ಚಿನ್ನದ ಅಂಬಾರಿ ಹೊರಿಸಿದ್ದು ಎಂದರು.
ಆನೆ ಮೇಲೆ ಅಂಬಾರಿ ಹೊರಿಸಲು ಸರ್ಕಾರ ಎಲ್ಲಿ ತನಕ ಆದೇಶ ಕೊಡುತ್ತದೆಯೋ ಅಲ್ಲಿ ತನಕ ಹೊರಿಸಬಹುದು. ಮುಂದಿನ ವರ್ಷವೂ ಅಭಿಮನ್ಯುವಿನ ಮೇಲೆ ಅಂಬಾರಿ ಹೊರಿಸುವ ಕೆಲಸವನ್ನು ಖಂಡಿತಾ ಮಾಡೇ ಮಾಡುತ್ತೇನೆ ಎಂಬ ಗ್ಯಾರಂಟಿ ಇದೆ. ಈ ವರ್ಷ ಅವಕಾಶ ಸಿಕ್ಕಿದರೆ ಅಭಿಮನ್ಯು ಜಂಬೂಸವಾರಿ ನಡೆಸುತ್ತಾನೆ ಎಂದು ಡಾಕ್ಟರ್ ನಾಗರಾಜ್, ಡಿಸಿಎಫ್ ಅಲೆಗ್ಸಾಂಡರ್ ಹೇಳುತ್ತಿದ್ದರು ಎಂದು ತಿಳಿಸಿದರು.