ಮೈಸೂರು: ಚಿರತೆ ದಾಳಿಯಿಂದ ಯುವಕನೊಬ್ಬ ಪಾರಾಗಿ ಬಂದ ಘಟನೆ ತಿ ನರಸೀಪುರ ತಾಲೂಕಿನ ನುಗ್ಗಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ನುಗ್ಗಳ್ಳಿಕೊಪ್ಪಲು ಗ್ರಾಮದ ಸತೀಶ್ (33) ಚಿರತೆಯಿಂದ ಪಾರಾದ ಯುವಕ. ಕಬ್ಬಿನ ಗದ್ದೆಗೆ ನೀರು ಬಿಡಲು ಹೋದ ಸತೀಶ್ ಮೇಲೆ ಚಿರತೆ ದಾಳಿ ಮಾಡಿದೆ. ಈ ವೇಳೆ ಸತೀಶ್ ತನ್ನ ಮೊಬೈಲ್ನಿಂದ ಚಿರತೆಗೆ ಹೊಡೆದು ಹಲ್ಲೆಗೊಳಿಸಿದ್ದಾನೆ. ಬಳಿಕ ಅಲ್ಲಿಂದ ಗ್ರಾಮದ ಬಳಿಗೆ ಓಡೋಡಿ ಬಂದಿದ್ದಾನೆ.
ಗ್ರಾಮಸ್ಥರು ಸತೀಶ್ ಪರಿಸ್ಥಿತಿ ತಿಳಿದು ಆತಂಕಗೊಂಡಿದ್ದಾರೆ. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಸತೀಶ್ನನ್ನು ಮಂಡ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಿ.ನರಸೀಪುರ ತಾಲೂಕಿನಲ್ಲಿ ಚಿರತೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅರಣ್ಯ ಇಲಾಖೆ ಕಾರ್ಯ ವೈಖರಿಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.