ಮೈಸೂರು: ಬೈಕ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ನವ ವಿವಾಹಿತೆ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕಿನ ಹಾಡ್ಯ ಗ್ರಾಮದ ಬಳಿ ನಡೆದಿದೆ. ಹಲ್ಲರೆ ಗ್ರಾಮದ ಪೂಜಾ(19) ಮೃತ ದುರ್ದೈವಿಯಾಗಿದ್ದಾರೆ. ಪತಿ ಮದನ್ ಗಂಭೀರವಾಗಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಡಿಯಾಲ ಗ್ರಾಮದಿಂದ ಸಾರಿಗೆ ಬಸ್ ನಂಜನಗೂಡು ಕಡೆಗೆ ಬರುತ್ತಿದ್ದ ವೇಳೆ ಬೈಕ್ನಲ್ಲಿ ನವದಂಪತಿಗಳು ತೆರಳುತ್ತಿದ್ದಾಗ ಈ ಸಂಭವಿಸಿದೆ.
ದಂಪತಿಗೆ ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಇನ್ನು ತೀವ್ರವಾಗಿ ಗಾಯಾಗೊಂಡಿರುವ ಮದನ್ರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಗ್ರಾಮಾಸ್ಥರು ಬಸ್ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಡಿಪೋ ಮ್ಯಾನೇಜರ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪಾದಚಾರಿಗಳಿಗೆ ಡಿಕ್ಕಿ ಹೊಡೆದ ವಾಹನ: ಮಗು ಸೇರಿ ಮೂವರು ಸಾವು
ಶಹಾಪುರ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೂವರು ಸಾವು: ಮತ್ತೊಂದೆಡೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಭೀಮರಾಯನಗುಡಿ ರಾಜ್ಯ ಹೆದ್ದಾರಿಯ ಮುಡಬೂಳ ಗ್ರಾಮದ ಕ್ರಾಸ್ ಬಳಿ ಬಸ್ ಹಾಗೂ ಕಾರಿನ ನಡುವೆ ಮಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವುನ್ನಪ್ಪಿದ್ದು, ಇನ್ನೋರ್ವ ಆಸ್ಪತ್ರೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಸುರಪುರ ತಾಲೂಕಿನ ರಂಗಂಪೇಟ ಗ್ರಾಮದ ನಾಗರಾಜ ಸಿದ್ದಣ್ಣ ಸಜ್ಜನ (60), ಮಹಾದೇವಿ ನಾಗರಾಜ ಸಜ್ಜನ (55), ರೇಣುಕಾ ನಾರಾಯಣರಾವ್ ಪಾಡಮುಖಿ(62) ಮೃತ ದುರ್ದೈವಿಗಳು. ಕಲಬುರಗಿಯಲ್ಲಿ ಸ್ನೇಹಿತನ ಮಗನ ಮದುವೆ ಕಾರ್ಯಕ್ರಮವನ್ನು ಮುಗಿಸಿಕೊಂಡು ಕಾರ್ ಚಲಾಯಿಸಿಕೊಂಡು ನಾಗರಾಜ ಬರುತ್ತಿದ್ದರು.
ತಾಲೂಕಿನ ಮುಡಬೂಳ ಕ್ರಾಸ್ ಬಳಿ ಶಹಾಪುರದಿಂದ ಕಲಬುರಗಿಗೆ ತೆರಳುತ್ತಿದ್ದ ಸಾರಿಗೆ ಬಸ್ಸಿಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇನ್ನೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕುರಿತು ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.