ಮೈಸೂರು:ಕೊಲೆ ಪ್ರಕರಣದಲ್ಲಿ ಬಂಧಿಯಾದ ಖೈದಿ ಮನ ಪರಿವರ್ತನೆಯಾಗಿ ಮೈಸೂರಿನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದಾರೆ.
ಮೂಲತಃ ನಂಜನಗೂಡಿನ ಬದನವಾಳು ಗ್ರಾಮದ ನಿವಾಸಿಯಾದ ನಂಜುಂಡಸ್ವಾಮಿ, ಕಳೆದ 10 ವರ್ಷದ ಹಿಂದೆ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸಜಾ ಬಂಧಿ. ಆದರೆ, ತನ್ನ ತಪ್ಪಿನ ಅರಿವಾಗಿ ಈಗ ಜೈಲಿನಲ್ಲಿ ಪರಿವರ್ತನ ಖೈದಿಯಾಗಿ ಬದಲಾಗಿದ್ದಾರೆ.
ವಸ್ತು ಪ್ರದರ್ಶನದ ಆವರಣದಲ್ಲಿ ನಂಜುಂಡಸ್ವಾಮಿ ವ್ಯಾಪಾರ:
ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಪರಿವರ್ತನ ಉತ್ಪಾದನಾ ಮಳಿಗೆಯಲ್ಲಿ ಇವರು ಜೈಲು ಹಕ್ಕಿಗಳು ಜೈಲಿನಲ್ಲಿ ತರಬೇತಿ ಪಡೆದು ತಯಾರಿಸಿದ ಉತ್ಪನ್ನಗಳನ್ನು ಮೊದಲ ಬಾರಿಗೆ ಮೈಸೂರಿನ ವಸ್ತು ಪ್ರದರ್ಶನದ ಆವರಣದಲ್ಲಿ ಪರಿವರ್ತನ ಉತ್ಪನ್ನ ಮಳಿಗೆ ಮೂಲಕ ವ್ಯಾಪಾರ ಮಾಡುತ್ತಿದ್ದಾರೆ. ಜೈಲಿನಲ್ಲಿ ತಯಾರಾದ ಉತ್ತಮ ಗುಣಮಟ್ಟದ ರತ್ನಕಂಬಳಿಗಳು, ಟವೆಲ್, ಕರವಸ್ತ್ರ, ಮರದ ಪೀಠೋಪಕರಣಗಳು ಹಾಗೂ ಬೇಕರಿ ಉತ್ಪನ್ನಗಳನ್ನು ಈ ಮಳಿಗೆಯಲ್ಲಿ ಗ್ರಾಹಕರಿಗೆ ನಂಜುಂಡಸ್ವಾಮಿ ವ್ಯಾಪಾರ ಮಾಡುತ್ತಾರೆ. ಜೈಲಿನಲ್ಲಿದ್ದುಕೊಂಡೇ ಎಂಎ ಮುಗಿಸಿರುವ ನಂಜುಂಡಸ್ವಾಮಿ ಯಾವುದೇ ಕಾರಣಕ್ಕೂ ಕೋಪದ ಕೈಗೆ ಬುದ್ಧಿ ಕೊಟ್ಟು ಅನಾಹುತ ಮಾಡಿಕೊಳ್ಳಬೇಡಿ, ಜೀವನ ಅಮೂಲ್ಯ ಎನ್ನುತ್ತಾರೆ.