ಮೈಸೂರು: ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಸೂರು ಕಟ್ಟಿಸಿಕೊಡುವುದಾಗಿ ನೀಡಿದ ಭರವಸೆ ಭರವಸೆಯಾಗಿಯೇ ಉಳಿದಿದ್ದು, ಶಾಶ್ವತ ಸೂರಿಗಾಗಿ ಕಾಯುತ್ತಿರುವ ನಂಜನಗೂಡಿನ ವಿಶೇಷಚೇತನ ಹೆಣ್ಣು ಮಕ್ಕಳ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ.
ನಂಜನಗೂಡು ತಾಲೂಕು ಆಲಂಬೂರು ಗ್ರಾಮದ ಶಿವಮ್ಮ ಎಂಬವರು ಸ್ವಂತ ಮನೆಯಿಲ್ಲದೇ ಇಬ್ಬರು ವಿಶೇಷ ಚೇತನ ಹೆಣ್ಣು ಮಕ್ಕಳೊಂದಿಗೆ ಬೇರೆಯವರ ಜಗಲಿ ಮೇಲೆ ಸಂಕಷ್ಟದ ಜೀವನ ಮಾಡುತ್ತಿದ್ದಾರೆ. ಈ ಬಗ್ಗೆ ಕಳೆದ ಫೆ. 26 ರಂದು ಅತ್ತ ಗಂಡನೂ ಇಲ್ಲ, ಇತ್ತ ಮನೆಯೂ ಇಲ್ಲ : ವಿಶೇಷ ಚೇತನ ಪುತ್ರಿಯರೊಂದಿಗೆ ಜಗಲಿಯಲ್ಲೇ ದಿನ ದೂಡುತ್ತಿರುವ ಮಹಿಳೆ ಎಂಬ ಶೀರ್ಷಿಕೆಯಲ್ಲಿ ಈಟಿವಿ ಭಾರತದಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ವರುಣಾ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಶಿವಮ್ಮರ ಮನೆಗೆ ಭೇಟಿ ನೀಡಿ ಮನೆ ಕಟ್ಟಿಸಿಕೊಡುವುದು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದರು.
ಓದಿ : ಅತ್ತ ಗಂಡನೂ ಇಲ್ಲ, ಇತ್ತ ಮನೆಯೂ ಇಲ್ಲ : ವಿಶೇಷ ಚೇತನ ಪುತ್ರಿಯರೊಂದಿಗೆ ಜಗಲಿಯಲ್ಲೇ ದಿನ ದೂಡುತ್ತಿರುವ ಮಹಿಳೆ
ಶಾಸಕರು ಮತ್ತು ಅಧಿಕಾರಿಗಳ ದಂಡು ಮನೆ ಬಾಗಿಲಿಗೆ ಬಂದದ್ದು ನೋಡಿ ನಮಗೇ ಮನೆ ಸಿಕ್ಕೇ ಬಿಡ್ತು ಎಂದು ಶಿವಮ್ಮ ಅಂದು ಕೊಂಡಿದ್ದರು. ಆದರೆ, ಶಾಸಕರು ನೀಡಿದ್ದ ಭರವಸೆ ಕೇವಲ ಭರವಸೆಯಾಗಿಯೇ ಉಳಿದಿದೆ ಹೊರತು, ಇದುವರೆಗೆ ಕಾರ್ಯಗತವಾಗಿಲ್ಲ. ತಿಂಗಳು ಕಳೆದರೂ ಶಿವಮ್ಮ ಕುಟುಂಬಕ್ಕೆ ಮನೆ ಕಟ್ಟಿಸಿಕೊಡುವ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಅಧಿಕಾರಿಗಳು, ಜನಪ್ರತಿನಿಧಿಗಳು ಮನೆ ಬಾಗಿಲಿಗೆ ಬರುತ್ತಾರೆ. ಆದರೆ ನಮಗೊಂದು ಮನೆ ಕಟ್ಟಿಸಿಕೊಡ್ತಿಲ್ಲ ಎಂದು ಶಿವಮ್ಮ ಅಳಲು ತೋಡಿಕೊಂಡಿದ್ದಾರೆ.