ಮೈಸೂರು: ಕೊರೊನಾ ಲಾಕ್ಡೌನ್ನಿಂದ ಬ್ಯುಸಿನೆಸ್ ಇಲ್ಲದೆ ಕಂಗೆಟ್ಟರೂ ಏನಾದರೂ ಸೇವೆ ಮಾಡಬೇಕು ಎಂಬ ಹಂಬಲದಿಂದ ಹೋಂ ಐಸೋಲೇಷನ್ನಲ್ಲಿರುವ ಬಡ ಕೋವಿಡ್ ರೋಗಿಗಳಿಗೆ ಉಚಿತ ಊಟ ನೀಡಿ ವ್ಯಕ್ತಿಯೊಬ್ಬರು ಇತರರಿಗೆ ಮಾದರಿಯಾಗಿದ್ದಾರೆ.
ಹೌದು, ಮಂಚೇಗೌಡನಕೊಪ್ಪಲು ನಿವಾಸಿ ಮೋಹನ್ ಅವರು ಮೆಸ್ ನಡೆಸಿ ಜೀವನ ನಡೆಸುತ್ತಿದ್ದರು. ಆದರೆ, ಕೊರೊನಾ ಆರ್ಭಟದಿಂದ ರಾಜ್ಯ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದ್ದರಿಂದ ವ್ಯಾಪಾರಕ್ಕೆ ದೊಡ್ಡ ಹೊಡೆತ ಬಿದ್ದಿತ್ತು. ಆದರೆ, ನಮಗಿಂತ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ಹೋಂ ಐಸೋಲೇಷನ್ನಲ್ಲಿರುವ ಬಡ ರೋಗಿಗಳಿಗೆ ಲಾಕ್ಡೌನ್ ಘೋಷಣೆಯಾದ ದಿನದಿಂದಲೂ ಉಚಿತವಾಗಿ ಉಪಹಾರ ಹಾಗೂ ಊಟ ನೀಡುತ್ತಿದ್ದಾರೆ.
ಮೈಸೂರು ನಗರ ವ್ಯಾಪ್ತಿಗೆ ಮೋಹನ್ ತಮ್ಮ ಸೇವೆಯನ್ನ ಸೀಮಿತಗೊಳಿಸಿದ್ದಾರೆ. ದೂರದ ಊರುಗಳಿಗೆ ವಾಹನದ ಸಮಸ್ಯೆ ಎದುರಾಗಿದೆ. ಅಲ್ಲದೇ ಪೆಟ್ರೋಲ್ ದರ ಕೂಡ ಗಗನಕ್ಕೇರಿದೆ. ಇವರ ಕಾರ್ಯಕ್ಕೆ ಪತ್ನಿ ಹಾಗೂ ಪುತ್ರ ಸಾಥ್ ನೀಡಿದರೆ, ಸ್ನೇಹಿತರು ಕೈಲಾದ ಸಹಾಯ ಮಾಡುತ್ತಿದ್ದಾರೆ. ಪ್ರತಿನಿತ್ಯ 20ಕ್ಕೂ ಹೆಚ್ಚು ಮಂದಿಗೆ ಉಚಿತ ಊಟ ನೀಡುತ್ತಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಹಣವಿಲ್ಲದ ಪರಿಸ್ಥಿತಿಯಲ್ಲಿಯೂ ಸೇವೆ ಮಾಡಬೇಕು ಎಂಬ ಹಂಬಲ ಇವರಿಗಿದೆ.