ಮೈಸೂರು: ವರದಕ್ಷಿಣೆಗಾಗಿ ತನ್ನ ಪತ್ನಿಯ ಕತ್ತು ಹಿಸುಕಿ ಹತ್ಯೆಗೈದ ಗಂಡನನ್ನು ಉದಯಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಶಾಂತಿನಗರ ನಿವಾಸಿಯಾದ ಮುಜೀದ್ ಅಹಮದ್ ಬಂಧಿತ ಆರೋಪಿ. ಈತ ತನ್ನ ಪತ್ನಿ ಆಫ್ರೀನ್ ಬೇಗಂಳನ್ನು ವರದಕ್ಷಿಣೆಗಾಗಿ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಜೀದ್ ಅಹಮದ್ 3 ವರ್ಷಗಳ ಹಿಂದೆ ಆಫ್ರೀನ್ಳನ್ನು ಮದುವೆಯಾಗಿದ್ದ. ಅಲ್ಲದೆ 4 ತಿಂಗಳ ಗಂಡು ಮಗು ಸಹ ಇದ್ದು, ಹೆಂಡತಿಯ ಜೊತೆ ಪ್ರತಿದಿನ ವರದಕ್ಷಿಣೆ ವಿಚಾರವಾಗಿ ಜಗಳವಾಡುತ್ತಿದ್ದನಂತೆ. ಮಾತಿಗೆ ಮಾತು ಬೆಳೆದು ಆಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಆಫ್ರೀನ್ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಉದಯಗಿರಿ ಪೊಲೀಸರು ಭೇಟಿ ನೀಡಿ ಮೃತದೇಹದ ಮಹಜರು ಮಾಡಿ ಸಂಶೋಧನಾ ಸಂಸ್ಥೆ ಶವಾಗಾರಕ್ಕೆ ಸ್ಥಳಾಂತರಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ಇನ್ನು ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.