ಮೈಸೂರು: ದಂಡದಿಂದ ಪಾರಾಗಲು ಬೇರೊಬ್ಬರ ಬೈಕ್ ನಂಬರ್ ಹಾಕಿಕೊಂಡು ರಾಜಾರೋಷವಾಗಿ ತಿರುಗಾಡುತ್ತಿದ್ದ ಬುಲೆಟ್ ಬೈಕ್ ಸವಾರನನ್ನು ಬಂಧಿಸಿ, ಬೈಕ್ನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕುವೆಂಪುನಗರದ ನಿವಾಸಿ ಡಿ.ಚಂದ್ರು ಅವರು ಡಿ.6 ರಂದು ತಮ್ಮ ಬಾಬ್ತು ಡಿಯೋ ಸ್ಕೂಟರ್ ನಂ.(ಕೆಎ-09, ಹೆಚ್‌ಜೆ-0597) ವಿರುದ್ದ ಸಂಚಾರ ನಿಯಮ ಉಲ್ಲಂಘನೆಗಳ ಸಂಬಂಧ 39 ನೋಟಿಸ್ ಬಂದಿದ್ದು, ಈ ಸಂಬಂಧ ಪೊಲೀಸ್ ಆಯುಕ್ತರವರ ಕಚೇರಿಯ ಟ್ರಾಫಿಕ್ ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ಫೋಟೊ ಪರಿಶೀಲಿಸಲಾಗಿ, ಬುಲೆಟ್ ಮೋಟಾರ್ ಸೈಕಲ್ ಸವಾರನೊಬ್ಬ ಡಿಯೋ ಸ್ಕೂಟರ್‌ನ ನೊಂದಣಿ ಸಂಖ್ಯೆ ಕೆಎ-09, ಹೆಚ್‌ಜೆ-0597 ನ್ನು ತನ್ನ ಬುಲೆಟ್ ಬೈಕ್‌ನಲ್ಲಿ ಬಳಕೆ ಮಾಡುತ್ತಿರುವುದು ತಿಳಿದು ಬಂದಿದೆ.
ಈ ಬುಲೆಟ್ ಬೈಕ್ ಹೆಚ್ಚಾಗಿ ಪಡುವಾರಹಳ್ಳಿ ಸರ್ಕಲ್ ಬಳಿ ಓಡಾಡುತ್ತಿರುವುದು ತಿಳಿದು ಬಂದ ಮೇರೆಗೆ ಬುಲೆಟ್ ಸವಾರನ ಮೇಲೆ ಕ್ರಮ ಕೈಗೊಳ್ಳುವಂತೆ ಚಂದ್ರು ಅವರು ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಈ ದೂರಿನ ಮೇರೆಗೆ ಈ ಬುಲೆಟ್ ವಾಹನವನ್ನು ಪತ್ತೆ ಮಾಡುವ ಬಗ್ಗೆ ಸಂಚಾರ ವಿಭಾಗದ ಎಸಿಪಿ ಅವರು, ನಿಸ್ತಂತು ಮುಖಾಂತರ ಎಲ್ಲಾ ಸಂಚಾರ ಪೊಲೀಸರಿಗೆ ತಿಳಿಸಿದ್ದು, ಮಾಹಿತಿ ತಿಳಿಸಿದ 2 ಗಂಟೆಯಲ್ಲೇ ಎನ್.ಆರ್.ಸಂಚಾರ ಠಾಣಾ ಆರಕ್ಷಕ ನಿರೀಕ್ಷಕರವರು ತಮ್ಮ ಸಿಬ್ಬಂದಿ ಜೊತೆ ಇರ‍್ವಿನ್ ರಸ್ತೆಯಲ್ಲಿ ಬುಲೆಟ್ ಮೋಟಾರ್ ಸೈಕಲನ್ನು ಪತ್ತೆ ಮಾಡಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆಗಳ ದಂಡವನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಈ ರೀತಿಯಾಗಿ ವಾಹನ ಸಂಖ್ಯೆ ಬದಲಾವಣೆ ಮಾಡಿಕೊಂಡಿರುವುದಾಗಿ ಆರೋಪಿ ರವಿ ತಿಳಿಸಿದ್ದಾನೆ. ನಕಲಿ ನಂಬರ್ ಉಪಯೋಗಿಸುತ್ತಿರುವುದು ಕಂಡಬಂದಲ್ಲಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಲು ಕೋರಲಾಗಿದೆ.
ಇನ್ನು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ಎನ್.ಆರ್. ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಆರ್.ದಿವಾಕರ್ ಸಿಬ್ಬಂದಿಗಳಾದ ಕಲೀಂ ಪಾಷ ಮತ್ತು ನಾಗೇಶ್ ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.