ಮೈಸೂರು: ಆಸಿಡ್ ಮಿಶ್ರಿತ ನೀರು ಕುಡಿದ ಬಾಲಕನೋರ್ವ ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ತಿ.ನರಸೀಪುರ ಪಟ್ಟಣದಲ್ಲಿ ನಡೆದಿದೆ.
ತಿ.ನರಸೀಪುರ ಪಟ್ಟಣದ ಫ್ಲೋರಿಯನ ಶಾಲೆಯ ಎಲ್ಕೆಜಿ ವಿದ್ಯಾರ್ಥಿ ಕೆ. ಪ್ರಣವ್ ನಾಯಕ್ ಆಸಿಡ್ ಮಿಶ್ರಿತ ನೀರು ಕುಡಿದು ಅಸ್ವಸ್ಥಗೊಂಡಿದ್ದು, ಬಾಲಕನನ್ನು ಅಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಗರಕ್ಕೆ ಕರೆತರಲಾಗಿದೆ.
ಪ್ರತಿಷ್ಠಿತ ಕ್ರಿಸ್ಟಲ್ ಕಂಪನಿ ಬಾಟಲ್ ನಲ್ಲಿ ಆಸಿಡ್ ಅಂಶ ಪತ್ತೆಯಾಗಿದ್ದು, ಶಾಲೆಯಲ್ಲಿ ನೀರು ಕುಡಿದ ತಕ್ಷಣ ಬಾಲಕ ಪ್ರಣವ್ ನಾಯಕ್ ಅಸ್ವಸ್ಥಗೊಂಡಿದ್ದಾನೆ. ನಂತರ ಶಿಕ್ಷಕರು ಪರಿಶೀಲಿಸಿದಾಗ ನೀರಿನಲ್ಲಿ ಆಸಿಡ್ ಅಂಶ ಪತ್ತೆಯಾಗಿದೆ ಎನ್ನಲಾಗಿದೆ.
ಸ್ಥಳೀಯ ಕಿರಾಣಿ ಅಂಗಡಿಯಲ್ಲಿ ಬಾಲಕನ ತಂದೆ ಕ್ರಿಸ್ಟಲ್ ಕಂಪನಿಯ ನೀರಿನ ಬಾಟಲಿಯನ್ನು ಖರೀದಿ ಮಾಡಿ ಮಗನಿಗೆ ಶಾಲೆಗೆ ತೆಗೆದುಕೊಂಡು ಹೋಗಲು ಹೇಳಿದ್ದಾರೆ, ಆದರೆ ಶಾಲೆಯಿಂದ ಮಗ ಅಸ್ವಸ್ಥನಾಗಿದ್ದಾನೆಂದು ಕರೆ ಬಂದಿದ್ದು, ಚಿಕಿತ್ಸೆ ನೀಡಿದಾಗ ಸತ್ಯಾಂಶ ಹೊರಬಿದ್ದಿದೆ.