ಮೈಸೂರು: ನಗರದಲ್ಲಿ ನಡೆಯುತ್ತಿದ್ದ ದರೋಡೆ ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ಶ್ರಮವಹಿಸಿದೆ. ಎರಡು ಪ್ರತ್ಯೇಕ ಪ್ರಕರಣದಲ್ಲಿ ಒಟ್ಟು ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ ಆರೋಪಿಗಳನ್ನು ಜೈಲಿಗೆ ಕಳುಹಿಸಿದ್ದಾರೆ.
ಸ್ನೇಹಿತನಿಗೆ ವಂಚನೆ!
ಸ್ನೇಹಿತನ ಅಮಾಯಕತೆ ಹಾಗೂ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡ ಐವರು ಸ್ನೇಹಿತರು 33 ಲಕ್ಷ ಪೀಕಿ, ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಬೆಂಗಳೂರಿನ ವಿಜಯನಗರದ ನಟೇಶ್ (41), ಟಿ ನರಸೀಪುರ ತಾಲೂಕಿನ ಅತ್ತಹಳ್ಳಿ ಗ್ರಾಮದ ಅಮೀರ್ ಖಾನ್ (29), ಮಹೇಶ್ (43), ಸತೀಶ (26) ಮತ್ತು ಬನ್ನೂರು ಪಟ್ಟಣದ ಶ್ರೀನಿವಾಸ (38) ಬಂಧಿತರು. ಮತ್ತೊಬ್ಬ ಆರೋಪಿ ಅಯೂಬ್ ತಲೆಮರೆಸಿಕೊಂಡಿದ್ದು, ಈತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ತಿ.ನರಸೀಪುರ ತಾಲೂಕಿನ ಹಳೇಕೆಂಪಯ್ಯನಹುಂಡಿ ಗ್ರಾಮದ ಸುರೇಶ್ ಎಂಬಾತನಿಗೆ ಸ್ನೇಹಿತರಾದ ಆರು ಮಂದಿ ರೈಸ್ ಪುಲ್ಲಿಂಗ್ (ಅದೃಷ್ಟದ ಚೆಂಬು) ಖರೀದಿ ಮಾಡಿದ್ರೆ ಅದೃಷ್ಟ ಖುಲಾಯಿಸುತ್ತದೆ ಎಂದು ನಂಬಿಸಿದ್ದಾರೆ. ಅದನ್ನು ಪಡೆಯಲು ಕೋಟ್ಯಂತರ ಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನು ನಂಬಿದ ಸುರೇಶ್, ತನ್ನ ಮನೆಯನ್ನು ಅಡವಿಟ್ಟು ಹಾಗೂ ಇತರ ಸ್ನೇಹಿತರಿಂದ ಸಾಲ ಪಡೆದು ಒಟ್ಟು 33 ಲಕ್ಷ ಸಂಗ್ರಹಿಸಿ ಹಂತಹಂತವಾಗಿ ತನ್ನ ಸ್ನೇಹಿತರಿಗೆ ಕೊಟ್ಟಿದ್ದನು. ತಾನು ಮೋಸ ಹೋಗಿರುವುದು ಗೊತ್ತದ ಮೇಲೆ ಹಣ ವಾಪಸ್ ನೀಡುವಂತೆ ಸುರೇಶ್ ಕೇಳಿಕೊಂಡಾಗ ಬೆದರಿಕೆ ಹಾಕಿದ್ದಾರೆ. ಇದರಿಂದ ಮನನೊಂದ ಸುರೇಶ್ ನಂಜನಗೂಡು ಪಟ್ಟಣ ಠಾಣೆಯಲ್ಲಿ ಮಾ.16ರಂದು ದೂರು ದಾಖಲಿಸಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಗಳ ಹೆಡಮುರಿ ಕಟ್ಟಿ ಒಂದೇ ದಿನದಲ್ಲಿ ಬಂಧಿಸಿ, 25 ಲಕ್ಷ ರೂ.ವಶಕ್ಕೆ ಪಡೆದಿದ್ದಾರೆ.
ಅಪಹರಣ
ಗ್ರಾನೈಟ್ ಕಮಿಷನ್ ವ್ಯವಹಾರ ಮಾಡುತ್ತಿದ್ದ ವ್ಯಕ್ತಿಯನ್ನು ಅಪಹರಿಸಿ ಹಣ ಪಡೆದಿದ್ದ ಮೂವರು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಕಲ್ಯಾಣಗಿರಿಯ ಜಾವೀದ್ ಖಾನ್ ಅಲಿಯಾಸ್ ಸೈನೆಡ್ ಜಾವೀದ್ (40), ಉದಯಗಿರಿಯ ಮಹಮ್ಮದ್ ನಜೀಬ್ (26) ಮತ್ತು ರಾಜೀವ್ ನಗರದ ಶಾಕೀರುದ್ದಿನ್ (24) ಬಂಧಿತ ಆರೋಪಿಗಳು.
ಚಾಮರಾಜನಗರ ಪಟ್ಟಣದ ಅಗ್ರಹಾರ ನಿವಾಸಿ ಜಬೀಖಾನ್ ಗ್ರಾನೈಟ್ ಕಮಿಷನ್ ವ್ಯವಹಾರ ಮಾಡಿಕೊಂಡಿದ್ದರು. ಈತನ ಬಳಿ ಕೋಟ್ಯಂತರ ಹಣ ಇರಬಹುದು ಎಂದು ಭಾವಿಸಿದ ಆರೋಪಿಗಳು 2021ರ ಜನವರಿ 10 ರಂದು ಎರಡು ಕಾರುಗಳಲ್ಲಿ ಬಂದ ಎಂಟು ಜನ ದುಷ್ಕರ್ಮಿಗಳು ಇವರನ್ನು ಅಡ್ಡಗಟ್ಟಿ ರಿವಾಲ್ವರ್ ಹಾಗೂ ಚಾಕು ತೋರಿಸಿ, ಹಲ್ಲೆ ಮಾಡಿ ಅಪಹರಿಸಿದ್ದರು.
ಅಪಹರಣದ ನಂತರ ರಾಮನಗರ ಜಿಲ್ಲೆಯ ಬಿಡದಿ ಹತ್ತಿರ ಕಲ್ಲುಗುಡ್ಡದ ಏರಿಯಾದ ಬಳಿ ಕರೆದುಕೊಂಡು ಹೋದ ಆರೋಪಿಗಳು ಮೊಬೈಲ್, ಎಟಿಎಂ ಕಾರ್ಡ್, 2 ಸಾವಿರ ನಗದು, 2 ಗ್ರಾಂನ ಎರಡು ಚಿನ್ನದ ಡಾಲರ್ ಸುಲಿಗೆ ಮಾಡಿದ್ದರು. ಬಳಿಕ ಜಬೀಖಾನ್ನನ್ನು ನಾಗಮಂಗಲದ ಲಾಡ್ಜ್ ಇರಿಸಿದ್ದರು.
ಆರೋಪಿಗಳು ಜಬೀಖಾನ್ನ ಮೂಲಕ ಅವರ ಮನೆಗೆ ಕರೆ ಮಾಡಿಸಿ 6.70 ಲಕ್ಷ ರೂ ತರಿಸಿಕೊಂಡಿದ್ದಾರೆ. ಅಲ್ಲದೇ ಎರಡು ಎಟಿಎಂ ಕಾರ್ಡ್ಗಳಿಂದ 16 ಸಾವಿರ ರೂ.ಡ್ರಾ ಮಾಡಿಕೊಂಡು ನಂತರ ಜಬೀಖಾನ್ನ ಮೇಲೆ ಹಲ್ಲೆ ಮಾಡಿ, ಬೆದರಿಕೆ ಹಾಕಿ ಬಿಟ್ಟು ಕಳುಹಿಸಿದ್ದಾರೆ.
ಇವರಿಂದ ಮನನೊಂದ ಜಬೀಖಾನ್ ಎರಡು ತಿಂಗಳ ಕಾಲ ಮನೆಯಿಂದ ಆಚೆ ಬರಲು ಹೆದರುತ್ತಿದ್ದರು. ನಂತರ ಮಾರ್ಚ್ 16ರಂದು ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕಾರ್ಯಪ್ರವೃತ್ತರಾದ ಪೊಲೀಸರು ಮಾ.17ರಂದು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಜಾವೀದ್ ಖಾನ್ ಅಲಿಯಾಸ್ ಸೈನೆಡ್ ಜಾವೀದ್ ಮೇಲೆ ಈಗಾಗಲೇ ಲಷ್ಕರ್ ಠಾಣೆ ಹಾಗೂ ಹಾಸನ ಠಾಣೆಯಲ್ಲಿ ಕೊಲೆ ಹಾಗೂ ಆರ್ಮ್ಸ್ ಆಕ್ಟ್ ಪ್ರಕರಣ, ಮಂಡ್ಯ ಪೂರ್ವ ಠಾಣೆ ಹಾಗೂ ಬೆಂಗಳೂರು ಸಿಸಿಬಿಯಲ್ಲಿ ಆರ್ಮ್ಸ್ ಆಕ್ಟ್ ಅಡಿ ಪ್ರಕರಣಗಳು ದಾಖಲಾಗಿದೆ. ಇನ್ನುಳಿದ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಪೊಲೀಸರು ಶೋಧ ಕೈಗೊಂಡಿದ್ದಾರೆ.
ಜಿಲ್ಲಾ ವರಿಷ್ಠಾಧಿಕಾರಿಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಸಿ.ಬಿ ರಿಷ್ಯಂತ್ ಪ್ರಕರಣಗಳ ಬಗ್ಗೆ ವಿವರಿಸಿದರು.