ಮೈಸೂರು: ಅರಮನೆ ಮುಂಭಾಗ ಪ್ರತಿಷ್ಠಾಪಿಸಲಾಗಿರುವ ಕಂಚಿನ ಹುಲಿಗಳ ಪ್ರತಿಮೆ ಎಲ್ಲಾ ಪ್ರವಾಸಿಗರ ಕೇಂದ್ರ ಬಿಂದುವಾಗಿದೆ. ಅರಮನೆಗೆ ಬಂದಂತಹ ಪ್ರವಾಸಿಗರು ಈ ಹುಲಿಗಳನ್ನು ನೋಡಿ ಫೋಟೋ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.
ಅರಮನೆಯಲ್ಲಿರುವ ‘ಕಂಚಿನಹುಲಿ’ ಕಥೆ:
ಅರಮನೆಯ ಹೊರ ಆವರಣದಲ್ಲಿ ಆಗಾಗ ಹುಲಿಗಳು ಬಂದು ಯಾರಿಗೂ ತೊಂದರೆ ಕೊಡದೆ, ವಿನಯವಾಗಿ ನಡೆದುಕೊಂಡು ಹೋಗುತ್ತಿದ್ದವು. ಇದನ್ನು ನೋಡುತ್ತಿದ್ದ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್, ನಮ್ಮ ಸಂಸ್ಥಾನದಲ್ಲಿ ಶೌರ್ಯದ ಹುಲಿಯು ಇಷ್ಟೊಂದು ಸೌಮ್ಯದಿಂದ ನಡೆದು ಹೋಗುತ್ತಿದೆ ಎಂದು ಸಂತೋಷ ಪಡುತ್ತಿದ್ದರು. ಹೀಗೆ ಅನೇಕ ವರ್ಷಗಳ ಕಾಲ ಅರಮನೆ ಹೊರ ಆವರಣದಲ್ಲಿ ಬಂದು ಹೋಗುತ್ತಿದ್ದ ಹುಲಿ. ಕೆಲ ದಿನಗಳ ನಂತರ ಕಾಣಿಸಿಕೊಳ್ಳಲಿಲ್ಲ. ಇದರಿಂದ ಮಹಾರಾಜರು ಬಹಳಷ್ಟು ಬೇಸರಗೊಳ್ಳುತ್ತಾರೆ. ಹುಲಿಗಳು ಬಂದು ಹೋಗುತ್ತಿದ್ದ ಕಥೆಯನ್ನು ತಮ್ಮ ಮಗ ನಾಲ್ವಡಿ ಕೃಷ್ಣರಾಜ ಒಡೆಯರ್ಗೆ ಹೇಳುತ್ತಿದ್ದರು. ಈ ಕಥೆಯನ್ನು ಕೇಳಿದ್ದ ಕೃಷ್ಣರಾಜ ಒಡೆಯರ್, ಅರಮನೆ ಆವರಣದಲ್ಲಿ ಹುಲಿ ಪ್ರತಿಮೆಗಳನ್ನು ಸ್ಥಾಪಿಸಿಬೇಕೆಂದು ಆಲೋಚಿಸಿದರು.
ಅದೇ ವೇಳೆಯಲ್ಲಿ ಅರಮನೆ ವೀಕ್ಷಣೆಗೆ ಬಂದಿದ್ದ, ಪ್ರಖ್ಯಾತ ಶಿಲ್ಪತಜ್ಞ ಬ್ರಿಟನ್‍ನ ‘ರಾಬರ್ಡ್ ವಿಲಿಯಂ ಕಾಲ್ಟನ್’ಗೆ ಹುಲಿಯ ಇತಿಹಾಸ ಹೇಳಿ, ಪ್ರತಿಮೆ ಸ್ಥಾಪನೆ ಮಾಡಿಕೊಂಡುವಂತೆ ವಿನಂತಿಸಿಕೊಂಡರು. ರಾಜರ ಮಾತಿಗೆ ಮನಸೋತ ರಾಬರ್ಡ್ ವಿಲಿಯಂ ಕಾಲ್ಟನ್ ಮೂರು ತಿಂಗಳ ಅವಧಿಯಲ್ಲಿ ಅರಮನೆಯ ತೊಟ್ಟಿಯ ಭಾಗದ ನಾಲ್ಕು ಕಡೆ ಕಂಚಿನ ಹುಲಿಯ ಪ್ರತಿಮೆಗಳನ್ನು ಸ್ಥಾಪಿಸಿದ್ರು.
ಎಲ್ಲೆಲ್ಲಿ ಇವೆ ಹುಲಿಯ ಪ್ರತಿಮೆಗಳು:
ಜಯಮಾರ್ತಂಡ ಗೇಟ್ ಬಳಿ ಎರಡು, ವರಹಗೇಟ್‍ಬಳಿ 2, ಜಯರಾಮ-ಬಲರಾಮಗೇಟ್ ಎದುರಾಗುವಂತೆ ಎರಡು ಹಾಗೂ ಒಳಭಾಗದಲ್ಲಿ ತೆರದ ತೊಟ್ಟಿಯ ಭಾಗ (ಜಟ್ಟಿ ಕಾಳಗ ಸ್ಥಳ)ದಲ್ಲಿ ಎರಡು ಹುಲಿ ಸೇರಿ ಒಟ್ಟು ಎಂಟು ಪ್ರತಿಮೆಗಳನ್ನು ಕಾಣಬಹುದಾಗಿದೆ. ಹುಲಿ ಶೌರ್ಯದ ಸಂಕೇತವಾಗಿರುವುದರಿಂದ ಮೈಸೂರು ಮಹಾರಾಜರು ಪ್ರತಿಮೆಗಳನ್ನು ಸ್ಥಾಪಿಸಿ ಗೌರವ ಕೊಡುತ್ತಾರೆ ಎಂಬ ಮಾತುಗಳು ಸಹ ಕೇಳಿ ಬಂದಿವೆ.