ಮೈಸೂರು : ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ ಸತತ ಗೈರಾಗುತ್ತಿರುವ ಹಿನ್ನೆಲೆಯಲ್ಲಿ 7 ಮಂದಿ ಎಸ್ಡಿಪಿಐ ಕಾರ್ಯಕರ್ತರನ್ನ ಹುಣಸೂರು ನಗರ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಎಸ್ಡಿಪಿಐನ ಕಾರ್ಯಕರ್ತರು 2019ರ ಫೆಬ್ರವರಿ 1ರಂದು ಯಾವುದೇ ಅನುಮತಿ ಪಡೆಯದೆ ಉಪವಿಭಾಗ ಅಧಿಕಾರಿಗಳ ಕಚೇರಿಯ ಎದುರು ಪ್ರತಿಭಟಿಸಿದ್ದರು.
ಅಂದಿನ ಉಪವಿಭಾಗ ಅಧಿಕಾರಿಯಾಗಿದ್ದ ಬಿ ಎನ್ ವೀಣಾ ಅವರು ಎಸ್ಡಿಪಿಐ ಕಾರ್ಯಕರ್ತರ ಮೇಲೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಸಾರ್ವಜನಿಕ ಶಾಂತಿ ಭಂಗ ಮಾಡಿದ್ದಾರೆ ಎಂದು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ಕಾರ್ಯಕರ್ತರು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹಾಗಾಗಿ, ನ್ಯಾಯಾಲಯವು ಎಸ್ಡಿಪಿಐ ಅಧ್ಯಕ್ಷ ಸೇರಿ 7 ಮಂದಿ ಕಾರ್ಯಕರ್ತರ ಮೇಲೆ ವಾರೆಂಟ್ ಜಾರಿ ಮಾಡಿದೆ.
ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಯೂನಸ್, ಎಸ್ಡಿಪಿಐ ತಾಲೂಕು ಅಧ್ಯಕ್ಷ ಅಕ್ಮಲ್ ಅಹಮದ್, ರೆಹಮತುಲ್ಲಾ ಷರೀಫ್, ಜಭಿವುಲ್ಲಾ, ಹೆಬ್ಸೂರು ರೆಹಮಾನ್, ಮಹಮದ್ ವಾಸಿಂ, ಮಹಮದ್ ಜಭಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದಾರೆ. ಹುಣಸೂರು ನಗರ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಸಿ ವಿ ರವಿ ಹಾಗೂ ಸಿಬ್ಬಂದಿಗಳಾದ ಮಂಜುನಾಥ್, ಚಂದ್ರಪ್ಪ, ಮಹಮದ್ ಆಲಿ ಅವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರಿಪಡಿಸಿದ್ದು. ಹೆಚ್ಚುವರಿ ಹಿರಿಯ ಶ್ರೇಣಿ ನ್ಯಾಯಾಧೀಶ ಶರಿನ್.ಜೆ.ಅನ್ಸಾರಿ ನ್ಯಾಯಾಂಗ ಬಂಧನಕ್ಕೊಳಪಡಿಸಿ ಆದೇಶಿಸಿದ್ದಾರೆ.