ಮೈಸೂರು : ಮದುವೆ ಎಂಬುದು ಮನುಷ್ಯನ ಜೀವನದಲ್ಲಿ ನಡೆಯುವ ಅದ್ಭುತ ಘಟನೆ. ಸಾಮಾನ್ಯವಾಗಿ ಮದುವೆ 25 ರಿಂದ 35 ವಯಸ್ಸಿನಲ್ಲಿ ನಡೆಯುತ್ತದೆ.
ಎಲ್ಲೋ ಅಪರೂಪದ ಜೋಡಿಗಳು 40-50 ವಯಸ್ಸಿನಲ್ಲಿ ಸಪ್ತಪದಿ ತುಳಿಯುತ್ತಾರೆ. ಇನ್ನೂ ಕೆಲವೊಮ್ಮೆ ವಿಚಿತ್ರ ಮತ್ತು ವಿಶಿಷ್ಟ ಮದುವೆಗಳು ನಡೆಯುತ್ತವೆ. ಇದೀಗ ಅಂತಹದೇ ಘಟನೆ ಮೈಸೂರಿನಲ್ಲಿ ನಡೆದಿದೆ.
ಉದಯಗಿರಿಯ ಗೌಸಿಯಾನಗರದ ನಿವಾಸಿಯಾಗಿರುವ ಹಾಜಿ ಮುಸ್ತಫಾ ತಮ್ಮ 85ನೇ ವಯಸ್ಸಿನಲ್ಲಿ 65 ವರ್ಷದ ಫಾತಿಮಾ ಅವರನ್ನು ಮದುವೆಯಾಗಿದ್ದಾರೆ.
ಮುಸ್ತಫಾ ಅವರು ಕುರಿ ಸಾಕುತ್ತಾ ತಮ್ಮ 9 ಮಕ್ಕಳಿಗೆ ಮದುವೆ ಮಾಡಿ ಜೀವನದಲ್ಲಿ ಆರ್ಥಿಕವಾಗಿ ಮತ್ತು ಆರೋಗ್ಯವಾಗಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಮುಸ್ತಫಾ, ತಮ್ಮ ಪತ್ನಿಯನ್ನು ಕಳೆದುಕೊಂಡಿದ್ದರು.
ಮಕ್ಕಳಿಗೆ ಮದುವೆ ಮಾಡಿ ಒಂಟಿ ಜೀವನ ನಡೆಸುತ್ತಿದ್ದ ಅವರಿಗೆ ಇಳಿ ವಯಸ್ಸಿನಲ್ಲಿ ಜೀವನ ನಡೆಸಲು ಕಷ್ಟವಾಗಿತ್ತಂತೆ. ಹೀಗಾಗಿ, ಗೌಸಿಯಾ ನಗರದಲ್ಲೇ ಒಂಟಿ ಜೀವನ ಸಾಗಿಸುತ್ತಿದ್ದ 65ರ ವೃದ್ಧೆ ಫಾತಿಮಾ ಕುರಿತು ವಿಚಾರಿಸಿದ್ದಾರೆ. ನಂತರ ಅವರಿಗೆ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಾರೆ.
ಫಾತಿಮಾರವರು ಮದುವೆಯಾಗಲು ಒಪ್ಪಿಕೊಂಡಿದ್ದು, ಕುಟುಂಬಸ್ಥರ ಸಮ್ಮುಖದಲ್ಲಿ ಕಳೆದ ವಾರ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಈ ಇಳಿ ವಯಸ್ಸಿನ ಮುಸ್ತಫಾ ಮತ್ತು ಫಾತಿಮಾ ನಿಖಾ ಕಂಡು ಗೌಸಿಯಾ ನಗರದ ನಿವಾಸಿಗಳು ಫಿದಾ ಆಗಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ