ಮೈಸೂರು: ನಗರದಲ್ಲಿ ಒಟ್ಟು ಟ್ರಾಫಿಕ್ ನಿಯಮ ಉಲ್ಲಂಘನೆ ಸಂಬಂಧ, 3 ಲಕ್ಷ ಪ್ರಕರಣಗಳು ವಿಲೇವಾರಿಯಾಗಿದ್ದು, ಇದರಿಂದ 6 ಕೋಟಿಯಷ್ಟು ಹಣ ಸಂಗ್ರಹವಾಗಿದೆ. ಬೆಂಗಳೂರು ನಗರದ ನಂತರ, ಮೈಸೂರು ನಗರದಲ್ಲಿ ಹೆಚ್ಚು ದಂಡ ಸಂಗ್ರಹವಾಗಿದೆ, ಎಂದು ಲೋಕ್ ಅದಾಲತ್ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎಸ್.ಸಂಗ್ರೇಶಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
6 ಕೋಟ ದಂಡ ಸಂಗ್ರಹ: ಇಂದು ರಾಷ್ಟ್ರೀಯ ಲೋಕ್ ಅದಾಲತ್ ಬಗ್ಗೆ ಮಾಹಿತಿ ನೀಡಲು, ನಗರದ ಮಳಲವಾಡಿ ನ್ಯಾಯಾಲಯದ ಆವರಣದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎಸ್.ಸಂಗ್ರೇಶಿ ಮಾತನಾಡಿದರು. ಮೈಸೂರು ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ರಿಯಾಯಿತಿ ಘೋಷಣೆ ಮಾಡಿದ ನಂತರ, ಇಲ್ಲಿಯವರೆಗೆ 3 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವಿಲೇವಾರಿಯಾಗಿವೆ. ಇದರಿಂದ 6 ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ.
ಇವತ್ತು ಒಂದು ದಿನ ಬಾಕಿ ಇದ್ದು, ಎಷ್ಟು ಪ್ರಕರಣಗಳು ವಿಲೇವಾರಿಯಾಗಲಿವೆ ಎಂಬುದು ನಾಳೆಗೆ ತಿಳಿಯಲಿದೆ ಎಂದ ಮುಖ್ಯ ನ್ಯಾಯಾಧೀಶರು ಬೆಂಗಳೂರು ನಗರದ ನಂತರ, ಮೈಸೂರು ನಗರದಲ್ಲಿ ಹೆಚ್ಚು ದಂಡ ಸಂಗ್ರಹವಾಗಿದೆ. ಇದಕ್ಕೆ ನಮ್ಮ ಪೊಲೀಸರು, ವಾಹನ ಸವಾರರು, ವಕೀಲರು ಹಾಗೂ ಸಾರ್ವಜನಿಕರು ಕೈ ಜೋಡಿಸಿದ್ದರಿಂದ 6 ಕೋಟಿಗೂ ಹೆಚ್ಚು ಹಣ ಇಲ್ಲಿಯವರೆಗೆ ಸಂಗ್ರಹವಾಗಿದೆ ಎಂದು ಅವರು ಮಾಹಿತಿ ನೀಡಿದರು.
36 ಕೌಟುಂಬಿಕ ಕಲಹ ಪ್ರಕರಣಗಳು ಇತ್ಯರ್ಥ: ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಬೆಂಗಳೂರು ಇವರ ನಿರ್ದೇಶನದಂತೆ, ಇಂದು ಮೈಸೂರು ಜಿಲ್ಲೆ ಸೇರಿದಂತೆ, ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಕಾನೂನು ರೀತಿ ರಾಜಿ ಆಗುವ ಪ್ರಕರಣಗಳನ್ನ, ರಾಜಿ ಮೂಲಕ ಇತ್ಯರ್ಥ ಪಡಿಸುವ ಉದ್ದೇಶದಿಂದ, ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಮೈಸೂರು ನಗರ ಹಾಗೂ ತಾಲೂಕು ನ್ಯಾಯಾಲಯಗಳಲ್ಲಿ ಒಟ್ಟು 1,12,918 ಪ್ರಕರಣಗಳು ಬಾಕಿ ಇದ್ದು, ಅವುಗಳಲ್ಲಿ 34,739 ಪ್ರಕರಣಗಳನ್ನ ರಾಜಿ ಆಗಬಲ್ಲ ಪ್ರಕರಣಗಳೆಂದು ಗುರುತಿಸಲಾಗಿದೆ. ಇವುಗಳಲ್ಲಿ ಇಲ್ಲಿಯವರೆಗೆ 19,586 ಪ್ರಕರಣಗಳನ್ನ ರಾಜಿ ಮೂಲಕ ಸಂಧಾನ ಮಾಡಿ ಇತ್ಯರ್ಥ ಪಡಿಸಲಾಗಿದೆ.
ಈ ಪ್ರಕರಣಗಳಲ್ಲಿ ಉಳಿದಿರುವ ರಾಜಿ ಸಂಧಾನಕ್ಕೆ ಒಳಪಡುವ 2,382 ಪ್ರಕರಣಗಳನ್ನ, ಹಾಗೂ 284 ವ್ಯಾಜ್ಯ ಪೂರ್ಣ ಪ್ರಕರಣಗಳನ್ನ, ಒಟ್ಟಾಗಿ 2666 ಪ್ರಕರಣಗಳನ್ನ, ಈ ಲೋಕ್ ಅದಾಲತ್ ನಲ್ಲಿ ಇತ್ಯರ್ಥ ಪಡಿಸಲಾಗಿದೆ ಎಂದು ನ್ಯಾಯಾಧೀಶರಾದ ಜಿ.ಎಸ್.ಸಂಗ್ರೇಶಿ ವಿವರಿಸಿದರು. ಈ ಬಾರಿ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ 36 ಕೌಟುಂಬಿಕ ಕಲಹ ಪ್ರಕರಣಗಳನ್ನ ಇತ್ಯರ್ಥ ಪಡಿಸಲಾಗಿದ್ದು, ಅದರಲ್ಲಿ ಮೈಸೂರು ನಗರ ಹಾಗೂ ಮೈಸೂರು ತಾಲೂಕಿನ ಪ್ರಕರಣಗಳು ಸೇರಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮಾಹಿತಿ ನೀಡಿದರು.
ಇದನ್ನೂ ಓದಿ: ರಿಯಾಯಿತಿಯಲ್ಲಿ ಸಂಚಾರಿ ದಂಡ ಪಾವತಿಗೆ ಇಂದು ಅಂತಿಮ ದಿನ: ಭರ್ಜರಿ ದಂಡ ಸಂಗ್ರಹಣೆ ನಿರೀಕ್ಷೆ