ಮೈಸೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ಕಂಗಾಲಾಗಿದ್ದ ಆಟೋ ಚಾಲಕರ ಖಾತೆಗೆ 5000 ರೂಪಾಯಿ ಸಂದಾಯವಾಗಿದೆ. ರಾಜ್ಯ ಸರ್ಕಾರ ಹಣ ಜಮೆ ಮಾಡಿರುವುದರಿಂದ ಆಟೋ ಚಾಲಕರ ಮುಖದಲ್ಲಿ ಕೊಂಚ ನಿರಾಳತೆ ಮೂಡಿದೆ.
ಕೊರೊನಾ ವೈರಸ್ ಹರಡದಂತೆ ತಡೆಯುವ ಉದ್ದೇಶದಿಂದ ಎರಡು ತಿಂಗಳು ಲಾಕ್ಡೌನ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರು, ನೇಕಾರರು, ಸವಿತಾ ಸಮಾಜ, ಟ್ಯಾಕ್ಸಿ-ಆಟೋ ಡ್ರೈವರ್ಸ್ ಸೇರಿದಂತೆ ಅನೇಕ ಸಣ್ಣ ಸಣ್ಣ ಉದ್ಯಮಿಗಳು ಭಾರೀ ಸಂಕಷ್ಟ ಎದುರಿಸಬೇಕಾಯಿತು.
ಇದರಿಂದ ಸರ್ಕಾರ ಕೆಲ ವಲಯಗಳಿಗೆ ಸಹಾಯಧನ ನೀಡಲು ಮುಂದಾಗಿತ್ತು. ಪರಿಣಾಮ ಅನೇಕರಿಗೆ ಸಹಾಯಧನದಿಂದ ಅನುಕೂಲವಾಗಿದೆ. ಎರಡೂವರೆ ತಿಂಗಳಿಂದ ಆಟೋ ಓಡಿಸದೆ ಕಂಗಾಲಾಗಿದ್ದ ಆಟೋ ಚಾಲಕರು ಆಹಾರ ಪದಾರ್ಥಗಳ ಕಿಟ್ಗಳನ್ನು ಪಡೆದು ಹಾಗೂ ಸಾಲ ಮಾಡಿ ಜೀವನ ದೂಡಿದ್ದಾರೆ.
ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ 5000 ರೂಪಾಯಿ ಆಟೋ ಚಾಲಕರಿಗೆ ನೀಡುತ್ತಿರುವುದರಿಂದ ಚಾಲಕರಿಗೆ ಖುಷಿಯಾಗಿದೆ. ಸರ್ಕಾರ ಕೇಳಿರುವ ದಾಖಲಾತಿಗಳನ್ನು ಒದಗಿಸಿರುವ ಚಾಲಕರಿಗೆ ಮಾತ್ರ ಸರ್ಕಾರದ ನೆರವು ಸಿಗುತ್ತಿದೆ.