ಮೈಸೂರು: ಸಾಂಸ್ಕೃತಿಕ ನಗರಿಯ ಪ್ರವಾಸಿ ಸ್ಥಳಗಳನ್ನು ನೋಡಲು ಇನ್ನು ಮುಂದೆ ಡಬ್ಬಲ್ ಡೆಕ್ಕರ್ ಅಂಬಾರಿ ಬಸ್ನಲ್ಲಿ ಸಂಚರಿಸಬಹುದಾಗಿದೆ. ಏನಿದರ ವಿಶೇಷತೆ?, ಹೇಗೆ ಇದರ ಸೌಲಭ್ಯ ಪಡೆಯಬಹುದು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ..
ಅರಮನೆಗಳ ನಗರಿ ಎಂದು ಪ್ರಸಿದ್ದಿ ಪಡೆದಿರುವ ಮೈಸೂರಿನ ಪ್ರವಾಸಿ ತಾಣಗಳನ್ನು ಇನ್ನು ಮುಂದೆ ಡಬ್ಬಲ್ ಡೆಕ್ಕರ್ ಬಸ್ ಕುಳಿತು ವೀಕ್ಷಿಸಬಹುದು. 'ಅಂಬಾರಿ' ಎಂಬ ಹೆಸರಿನಲ್ಲಿ 4 ಡಬ್ಬಲ್ ಡೆಕ್ಕರ್ ಬಸ್ಗಳು ಪ್ರವಾಸಿಗರು ಹಾಗೂ ಸ್ಥಳೀಯ ಸೇವೆಗೆ ಸಿದ್ದವಾಗಿದೆ. ಕೊರೊನಾದಿಂದ ದಸರಾ ಸರಳವಾದರೂ, ಮೈಸೂರು ನಗರಕ್ಕೆ ಬರುವ ಪ್ರವಾಸಿಗರಿಗೆ ಈ ಬಸ್ಗಳು ಆಕರ್ಷಣೆಯಾಗಲಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಡಬ್ಬಲ್ ಡೆಕ್ಕರ್ ಬಸ್ ಯೋಜನೆ ರೂಪಿಸಿದ್ದು, ಕೆಲವೇ ದಿನಗಳಲ್ಲಿ ರಸ್ತೆಗಿಳಿಯಲಿವೆ. ಈಗಾಗಲೇ ಒಂದು ಬಸ್ ನಗರಕ್ಕೆ ಆಗಮಿಸಿದ್ದು, ಉಳಿದ 3 ಬಸ್ಗಳು ಬೆಂಗಳೂರಿನಲ್ಲಿ ಸಿದ್ದವಾಗಿದೆ.
ಡಬ್ಬಲ್ ಡೆಕ್ಕರ್ ಬಸ್ ವಿಶೇಷತೆಗಳು: ಒಂದು ಬಸ್ ನಲ್ಲಿ 40 ಮಂದಿಗೆ ಅವಕಾಶ ಇರುತ್ತದೆ. ಆದರೆ ಕೋವಿಡ್ ಇರುವುದರಿಂದ ಬಸ್ನಲ್ಲಿ 30 ಪ್ರಯಾಣಿಕರು ಮಾತ್ರ ಸಂಚರಿಸಬಹುದು. ಹಾಗೂ ಕೆಳ ಭಾಗದಲ್ಲಿ ಹವಾನಿಯಂತ್ರಿತ ಮೇಲೆ ಓಪನ್ ಟಾಪ್ ಇರುತ್ತದೆ. ಒಂದು ಟಿಕೆಟ್ನಲ್ಲಿ ಇಡೀ ನಗರ ವೀಕ್ಷಿಸಬಹುದು ಜೊತೆಗೆ ದಿನವಿಡೀ ಪ್ರಯಾಣಿಸಬಹುದು. ಆಡಿಯೋ ಮೂಲಕ ಆಯಾ ಆಯಾ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಸಹ ನೀಡಲಾಗುತ್ತದೆ.
ಡಬ್ಬಲ್ ಡೆಕ್ಕರ್ ಬಸ್ನಲ್ಲಿ ದಿನವಿಡಿ ಪಯಣ: ನಗರದಲ್ಲಿ ಪ್ರತೀ 20 ನಿಮಿಷಗಳಿಗೆ ಒಮ್ಮೆ ಡಬ್ಬಲ್ ಡೆಕ್ಕರ್ ಬಸ್ ನಿಗದಿತ ಮಾರ್ಗದಲ್ಲಿ ಸಂಚರಿಸಲಿದೆ. ಈ ಬಸ್ಗಳಲ್ಲಿ ತೆರಳುವ ಪ್ರವಾಸಿಗರು ಖರೀದಿಸುವ ಟಿಕೆಟ್ನಲ್ಲಿ ಇಡೀ ದಿನ ಪ್ರಯಾಣಿಸಬಹುದಾಗಿದ್ದು, ಯಾವುದಾದರೊಂದು ಪ್ರದೇಶದಲ್ಲಿ ಇಳಿದು, ಸುತ್ತಾಡಿ ಮತ್ತೊಂದು ಬಸ್ನಲ್ಲಿ ಅದೇ ಟಿಕೆಟ್ನಲ್ಲಿ ಬೇರೆ ತಾಣಕ್ಕೆ ತೆರಳಬಹುದು. ಅಂದರೆ ಅರಮನೆಯಲ್ಲಿ ಇಳಿಯುವ ಪ್ರವಾಸಿಗರು ಅದನ್ನು ವೀಕ್ಷಿಸಿ ಅದೇ ಮಾರ್ಗದ ಮತ್ತೊಂದು ಅಂಬಾರಿ ಬಸ್ನಲ್ಲಿ ಮೃಗಾಲಯಕ್ಕೆ ತೆರಳಿ ವೀಕ್ಷಿಸಬಹುದು. ಇದೇ ರೀತಿ ಇಡೀ ದಿನ ನಗರವನ್ನು ಸುತ್ತಾಡಬಹುದು.
ಡಬ್ಬಲ್ ಡೆಕ್ಕರ್ ಬಸ್ನ ಸಂಚಾರ ಮಾರ್ಗ: ಈ ಡಬ್ಬಲ್ ಡೆಕ್ಕರ್ ಬಸ್ ನಿತ್ಯ ಜೆಎಲ್ಬಿ ರಸ್ತೆಯಲ್ಲಿರುವ ಹೋಟೆಲ್ ಮಯೂರದಿಂದ ತನ್ನ ಸಂಚಾರ ಆರಂಭಿಸಲಿದ್ದು, ಮೈಸೂರು ಅರಮನೆ, ಜಯಚಾಮರಾಜೇಂದ್ರ ಮೃಗಾಲಯ, ಜಗನ್ಮೋಹನ ಅರಮನೆ, ಕಾರಂಜಿಕೆರೆ, ಲಲಿತ್ ಮಹಲ್, ಸೇಂಟ್ ಫಿಲೋಮಿನಾ ಚರ್ಚ್, ಸಿ.ಎಫ್.ಟಿ.ಆರ್.ಐ, ಕಲಾಮಂದಿರ, ಕ್ರಾಫಡ್ ಹಾಲ್ ಮಾರ್ಗದಲ್ಲಿ ಸಂಚರಿಸಲಿದೆ. ಪ್ರಯಾಣಿಕರು ತಮ್ಮ ಮೊಬೈಲ್ನಲ್ಲಿ ಅಂಬಾರಿ ಆ್ಯಪ್ ಡೌನ್ ಲೋಡ್ ಮಾಡಿ ಇದರಲ್ಲಿ ಯಾವುದಾದರೂ ಪ್ರವಾಸಿ ತಾಣಕ್ಕೆ ತಲುಪಿದಾಗ ಅದರ ಪೂರ್ಣ ವಿವರವನ್ನು ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಆಡಿಯೋ ರೂಪದಲ್ಲಿ ನೀಡುತ್ತದೆ.
ಡಬ್ಬಲ್ ಡೆಕ್ಕರ್ ಬಸ್ ಸಂಚರಿಸಲು ರಸ್ತೆ ಕ್ಲಿಯರೆನ್ಸ್ ಗೆ ಮನವಿ: ಬಸ್ ಸಂಚರಿಸುವ ರಸ್ತೆಯ ಮಧ್ಯೆ ಹಾದು ಹೋಗುವ ಮರಗಳ ರೆಂಬೆಗಳು ಹಾಗೂ ವಿದ್ಯುತ್ ತಂತಿಗಳನ್ನು ತೆರವುಗೊಳಿಸಬೇಕಾಗಿದ್ದು, ಅದಕ್ಕಾಗಿ ಮೈಸೂರು ಮಹಾನಗರ ಪಾಲಿಕೆ ಹಾಗೂ ಸೆಸ್ಕಾಂಗೆ ಮನವಿ ಮಾಡಿದೆ. ಈಗಾಗಲೇ ರೆಂಬೆಗಳನ್ನು ತೆರವುಗೊಳಿಸುವ ಕಾರ್ಯ ನಡೆಸುತ್ತಿದ್ದು, ಸೆಸ್ಕಾಂ ಕೂಡ ಬಸ್ ಸಂಚರಿಸುವ ಮಾರ್ಗಗಳ ಮೇಲಿರುವ ವಿದ್ಯುತ್ ತಂತಿಗಳನ್ನು ಕೆಲವೇ ದಿನಗಳಲ್ಲಿ ತೆರವುಗೊಳಿಸಲಿದೆ ಎನ್ನಲಾಗಿದೆ.
ಇನ್ನು ಈ ಡಬ್ಬಲ್ ಡೆಕ್ಕರ್ ಬಸ್ ಬಗ್ಗೆ ಈಟಿವಿ ಭಾರತ್ ಜೊತೆ ದೂರವಾಣಿಯಲ್ಲಿ ಮಾತನಾಡಿದ ಕೆ.ಎಸ್.ಟಿ.ಡಿ.ಸಿ ಪ್ರಾಂತೀಯ ವ್ಯವಸ್ಥಾಪಕ ಉದಯಕುಮಾರ್ ಈಗಾಗಲೇ ಮೈಸೂರು ನಗರಕ್ಕೆ ಒಂದು ಡಬ್ಬಲ್ ಡೆಕ್ಕರ್ ಬಸ್ ಬಂದಿದ್ದು, ಉಳಿದ 3 ಬಸ್ಗಳು ಸಿದ್ದವಾಗಿದೆ. ಈ ಬಾರಿ ದಸರಾ ಸಂದರ್ಭ 4 ಅಂಬಾರಿ ಬಸ್ಗಳು ಪ್ರಮುಖ ಆಕರ್ಷಣೆಯಾಗಲಿವೆ. ಜೊತೆಗೆ ದಸರಾ ಕಳೆದ ಬಳಿಕವೂ ನಿರಂತರವಾಗಿ ನಗರದಲ್ಲಿ ಸಂಚಾರ ನಡೆಸುತ್ತವೆ ಎಂದು ತಿಳಿಸಿದರು.