ಮೈಸೂರು: ಜಿಲ್ಲೆಯಲ್ಲಿ ಇದುವರೆಗೆ 21 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು, ಒಂದು ಸಾವು ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾಧ್ಯಮಗಳಿಗೆ ತಿಳಿಸಿದರು.
ಸರ್ಕಾರಿ ಆದೇಶದ ಹಿನ್ನೆಲೆಯಲ್ಲಿ ಇಂದು ಬ್ಲ್ಯಾಕ್ ಫಂಗಸ್ ಚಿಕಿತ್ಸಾ ವಾರ್ಡ್ಗೆ ಪಿಪಿಇ ಕಿಟ್ ಧರಿಸಿ ತೆರಳಿ ಅಲ್ಲಿನ ಚಿಕಿತ್ಸಾ ವಿಧಾನವನ್ನು ಖುದ್ದು ಪರಿಶೀಲನೆ ನಡೆಸಿದ್ರು. ನಂತರ ಮಾತನಾಡಿ, ಇಲ್ಲಿಯವರೆಗೆ ಜಿಲ್ಲೆಯಲ್ಲಿ 21 ಕಪ್ಪು ಶಿಲೀಂದ್ರ ಪ್ರಕರಣ ಪತ್ತೆಯಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.
ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ - 17, ಜೆ.ಎಸ್.ಎಸ್. ಆಸ್ಪತ್ರೆ -3, ಅಪೋಲೋ ಆಸ್ಪತ್ರೆಯಲ್ಲಿ -1 ಪ್ರಕರಣ ಪತ್ತೆಯಾಗಿದ್ದು, ಅವರೆಲ್ಲ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಬೇರೆ ಕಡೆ ಬ್ಲ್ಯಾಕ್ ಫಂಗಸ್ ಪ್ರಕರಣ ಕಂಡು ಬಂದಿರುವ ಬಗ್ಗೆ ಮಾಹಿತಿ ಇಲ್ಲ ಎಂದರು.
ಕೆ.ಆರ್. ಆಸ್ಪತ್ರೆಯಲ್ಲಿ ಬ್ಲಾಕ್ ಫಂಗಸ್ಗೆ ಚಿಕಿತ್ಸೆ ಪಡೆಯುತ್ತಿರುವ 17 ಜನರಲ್ಲಿ 15 ಮಂದಿಗೆ ಕೋವಿಡ್ ಪಾಸಿಟಿವ್ ಇದೆ. 3 ಪ್ರಕರಣಗಳಲ್ಲಿ ಕೋವಿಡ್ ಬಂದು ಗುಣಮುಖರಾದವರಲ್ಲಿ ಈ ಫಂಗಸ್ ಕಂಡು ಬಂದಿದೆ. ಮುಖ್ಯವಾಗಿ ಈ ಕಪ್ಪು ಶಿಲೀಂದ್ರ ಬರುವುದು ರೋಗ ನಿರೋಧಕ ಶಕ್ತಿ ಕಡಿಮೆಯಾದವರಲ್ಲಿ ಮತ್ತು ಡಯಾಬಿಟಿಸ್ ಇರುವವರಿಗೆ. ಕೋವಿಡ್ ಬಂದ ಸಂದರ್ಭದಲ್ಲಿ ಸ್ಟಿರಾಯ್ಡ್ ಔಷಧಗಳನ್ನು ನೀಡಿದಾಗ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಆಗ ಈ ಫಂಗಸ್ ಬರುವ ಸಾಧ್ಯತೆ ಇದ್ದು, ಈ ಕಾಯಿಲೆಗೆ ಎಲ್ಲಾ ಕಡೆ ಚಿಕಿತ್ಸಾ ಸೌಲಭ್ಯವನ್ನು ಕೊಡಬೇಕೆಂದು ಸರ್ಕಾರ ಆದೇಶ ನೀಡಿದೆ ಎಂದು ತಿಳಿಸಿದರು.
ಬ್ಲ್ಯಾಕ್ ಫಂಗಸ್ ರೋಗದ ಗುಣಲಕ್ಷಣಗಳು:
ಶೀತ ಕಾಣಿಸಿಕೊಳ್ಳುತ್ತದೆ, ಮೂಗು ಊತ ಕಾಣಿಸಿಕೊಂಡು ಹೆಚ್ಚಾದಾಗ ಕಣ್ಣಿನ ಮೇಲೆ ಹಾಗೂ ಮೆದುಳಿಗೆ ಫಂಗಸ್ ದಾಳಿ ಮಾಡುತ್ತದೆ. ಈಗ ಫಂಗಸ್ ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ಬಂದರೆ ಚಿಕಿತ್ಸೆ ನೀಡಲಾಗುವುದು. ಸಾಮಾನ್ಯವಾಗಿ ಈ ಬ್ಲ್ಯಾಕ್ ಫಂಗಸ್ನಿಂದ ಗುಣವಾಗಲು 3 ವಾರಗಳು ಬೇಕು.
"ನಮ್ಮ ಮನೆಯಲ್ಲಿ 3 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಒಬ್ಬರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಯುತ್ತಿದ್ದಾರೆ. ನಾನು ಪ್ರತಿ ದಿನ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುತ್ತೇನೆ. ನೆಗೆಟಿವ್ ಬಂದರೆ ಮಾತ್ರ ಹೊರಗೆ ಬರುತ್ತೇನೆ. ನನ್ನಿಂದ ಯಾರಿಗೂ ತೊಂದರೆಯಾಗಬಾರದು ಎಂಬುದು ನಮ್ಮ ಉದ್ದೇಶ." ಎಂದು ಡಿಸಿ ರೋಹಿಣಿ ಇದೇ ವೇಳೆ ತಿಳಿಸಿದರು.