ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಬಜೆಟ್ ತಿರಸ್ಕಾರವಾಗಿದೆ. 118 ವರ್ಷದ ಮುಡಾ ಇತಿಹಾಸದಲ್ಲಿ 2021-22 ರ ಸಾಲಿನ ಆಯವ್ಯಯವನ್ನು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿಯಿಂದ ತಿರಸ್ಕೃತವಾಗಿದೆ.
ಶೇ.98 ಆಕ್ಷೇಪಗಳ ವಿವರ ನೀಡಿ ಪರಿಷ್ಕೃತ ಆಯವ್ಯಯ ಮಂಡಿಸುವಂತೆ ಸೂಚನೆ ನೀಡಲಾಗಿದೆ. 780 ಕಾಮಗಾರಿಗಳಿಗೆ 674 ಕೋಟಿ ರೂಪಾಯಿ ವೆಚ್ಚ ಪ್ರಸ್ತಾವನೆ ಮಾಡಿದ್ದರಿಂದ ಮುಡಾ ಬಜೆಟ್ಗೆ ಹಿನ್ನಡೆಯಾಗಿದೆ. ಹಾಗಾಗಿ ಪ್ರಾಧಿಕಾರದ ಕಾಯ್ದೆ ಮತ್ತು ಸರ್ಕಾರದ ಸುತ್ತೋಲೆಯನ್ನು ಸರಿಯಾಗಿ ಅರ್ಥೈಸಿಕೊಂಡು ನೂತನ ಆಯವ್ಯಯ ಸಿದ್ದಪಡಿಸಿ ಎಂದು ಆದೇಶ ನೀಡಲಾಗಿದೆ.
ಪ್ರಾಧಿಕಾರದ ಕಾಯ್ದೆ ಅನ್ವಯ ಹಿರಿಯ ಕೆಎಎಸ್ ಅಧಿಕಾರಿಗಳು ಆಯುಕ್ತರಾಗಿರಬೇಕು. ಆದರೆ, ವಿಭಾಗಾಧಿಕಾರಿ ಶ್ರೇಣಿಯ ಅಧಿಕಾರಿ ಡಿ.ಬಿ.ನಟೇಶ್ ಮುಡಾ ಆಯುಕ್ತರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಈ ಬಗ್ಗೆಯೂ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಳೆದ ಶನಿವಾರ ನಟೇಶ್ ಅವರನ್ನು ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರ, ಕೇವಲ ಒಂದೇ ದಿನಕ್ಕೆ ವರ್ಗಾವಣೆ ರದ್ದುಗೊಳಿಸಿ ಮುಡಾ ಆಯುಕ್ತರಾಗಿ ನಟೇಶ್ ವಾಪಸ್ ಬಂದಿದ್ದರು. ಇದರ ಹಿಂದೆ ಸಾಕಷ್ಟು ಲಾಬಿ ನಡೆದಿರುವ ಅನುಮಾನ ವ್ಯಕ್ತವಾಗಿದೆ.
ಇದನ್ನೂ ಓದಿ: ಮೈಸೂರಲ್ಲಿ ಮತ್ತೆ ಮೂರು ಡೆಲ್ಟಾ ಪ್ಲಸ್ ಸೋಂಕು ಪ್ರಕರಣ ಪತ್ತೆ