ಮೈಸೂರು: ಕೆರೆಯಲ್ಲಿ ಜಾನುವಾರುಗಳಿಗೆ ನೀರು ಕುಡಿಸಲು ಹೋಗಿದ್ದ ವೇಳೆ ಆಯ ತಪ್ಪಿ ಬಿದ್ದವನನ್ನು ರಕ್ಷಿಸಲು ಹೋದವ ಸೇರಿದಂತೆ ಕೆರೆಗೆ ಬಿದ್ದು ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಹುಣಸೂರು ತಾಲೂಕಿನ ಹಳೆ ವಾರಂಚಿ ಗ್ರಾಮದಲ್ಲಿ ನಡೆದಿದೆ.
ಅಬ್ದುಲ್ (24), ರಾಜಿಕ್ ಖಾನ್ (30) ಮೃತರು. ಅಬ್ದುಲ್ ಅವಿವಾಹಿತನಾಗಿದ್ದು, ರಾಜಿಕ್ ಖಾನ್‌ರಿಗೆ ಪತ್ನಿ, ಮೂರು ವರ್ಷದ ಪುತ್ರಿ ಇದ್ದಾಳೆ. ಹಳೆ ವಾರಂಚಿ ಗ್ರಾಮದ ಬಳಿಯ ಗುರುಪುರ ಕೆರೆಯಲ್ಲಿ ಜಾನುವಾರುಗಳಿಗೆ ನೀರು ಕುಡಿಸಲು ಹೋಗಿದ್ದ ವೇಳೆ ಹಗ್ಗ ಸಿಲುಕಿಕೊಂಡಿದ್ದು, ಅಬ್ದುಲ್ನನ್ನು ನೀರಿಗೆ ಎಳೆದೊಯ್ದಿದೆ. ನೀರಿಗೆ ಬೀಳುತ್ತಿದ್ದಂತೆ ರಾಜಿಕ್ ಖಾನ್ ಆತನನ್ನು ರಕ್ಷಿಸಲು ಹೋಗಿದ್ದಾನೆ. ಈ ವೇಳೆ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಜಾನುವಾರುಗಳು ಮಾತ್ರ ಇದ್ದುದನ್ನು ಕಂಡ ಇತರ ದನಗಾಹಿಗಳು, ಕೆರೆ ಬಳಿ ಬಂದು ನೋಡಿದಾಗ ಮೃತರ ಚಪ್ಪಲಿಗಳಿದ್ದು, ಈ ಕುರಿತು ಕೂಡಲೇ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.
ಇಬ್ಬರ ಶವವನ್ನು ಹೊರ ತೆಗೆಯಲಾಗಿದ್ದು, ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.