ಮೈಸೂರು: ಜಿಲ್ಲೆಯ ತಿ.ನರಸೀಪುರ ತಾಲೂಕಿನ ಕೊಡಗಹಳ್ಳಿ ಈಗ ಕೊರೊನಾ ಹಾಟ್ ಸ್ಪಾಟ್ ಆಗಿ ಪರಿಣಮಿಸಿದೆ. ಗ್ರಾಮದಲ್ಲಿ 185 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಕೊಡಗಹಳ್ಳಿ ಗ್ರಾಮದ 800 ಜನರಿಗೆ ಟೆಸ್ಟ್ ಮಾಡಲಾಗಿತ್ತು, ಈ ವೇಳೆ 185 ಜನರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಕಳೆದ ಕೆಲ ದಿನಗಳ ಹಿಂದೆ ಇದೇ ಗ್ರಾಮದ 20 ಜನರು ಕಾಶಿಯಾತ್ರೆಗೆ ಹೋಗಿ ಮರಳಿ ಬಂದಿದ್ದರಂತೆ. ಇವರಿಂದಲೇ ಹಳ್ಳಿಯಲ್ಲಿ ಕೋವಿಡ್ ಸೋಂಕು ಹರಡಿರಬಹುದೆಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ: ಸೋಂಕಿತರಿಗೆ ಹೋಮ್ ಐಸೋಲೇಷನ್ಗಿಂತ ಕೋವಿಡ್ ಕೇರ್ ಸೆಂಟರ್ ಉತ್ತಮ: ಸಚಿವ ಬಿ.ಸಿ.ಪಾಟೀಲ್
ಎರಡು ದಿನದ ನಂತರ ಮೃತ ವ್ಯಕ್ತಿಯ ಅಂತ್ಯಕ್ರಿಯೆ: ಕೊರೊನಾದಿಂದಾಗಿ ಗ್ರಾಮದೆಲ್ಲೆಡೆ ಭೀತಿ ಸೃಷ್ಟಿಯಾಗಿದ್ದು, ಶವ ಎತ್ತಲೂ ಸಹ ಜನರಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಮಹದೇವಪ್ಪ ಎಂಬುವರು ಕೊರೊನಾದಿಂದ ಸಾವನ್ನಪ್ಪಿದ್ದು, ಮಕ್ಕಳು ಇಲ್ಲದೆ ಸಂಬಂಧಿಕರೂ ಇಲ್ಲದೆ ಮೃತದೇಹ ಅನಾಥವಾಗಿ ಬಿದ್ದಿತ್ತು. ಗ್ರಾಮದ ಜನರು ಕೂಡ ಶವ ಮುಟ್ಟಲು ಭಯದಿಂದ ದೂರ ಸರಿದಿದ್ದರು. ಎರಡು ದಿನದ ನಂತರ ಮೃತ ವ್ಯಕ್ತಿಯ ಅಂತ್ಯಕ್ರಿಯೆಯನ್ನು ತಾಲೂಕು ಆಡಳಿತ ಮಾಡಿದೆ.