ಮೈಸೂರು: ಹಾಲು ಗಲ್ಲದ ಹದಿನೆಂಟು ತಿಂಗಳ ಪುಟಾಣಿಯೊಂದು ಮಾತನಾಡಲು ತೊದಲುವ ವಯಸ್ಸಲ್ಲೇ ಮುದ್ದುಮುದ್ದಾಗಿ ತಿಂಗಳು, ವರ್ಣಮಾಲೆ, ಇತಿಹಾಸ ಪ್ರಸಿದ್ಧ ವ್ಯಕ್ತಿಗಳನ್ನು ಗುರುತಿಸುತ್ತಾಳೆ. ಈ ಮಗುವಿನ ಹೆಸರು ದಿಯಾ. ಅಂಬೆಗಾಲಿಡುವ ಸಂದರ್ಭದಲ್ಲಿ ಅಸಾಮಾನ್ಯ ಬುದ್ಧಿವಂತಿಕೆ ಹೊಂದಿದ್ದಾಳೆ. ಈ ಕಾರಣಕ್ಕೆ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ನ ಸೂಪರ್ ಟ್ಯಾಲೆಂಟಡ್ ಕಿಡ್ ಪಟ್ಟಿಯಲ್ಲಿ ಈಕೆಯ ಹೆಸರು ಸೇರಿಕೊಂಡಿದೆ. ಪ್ರಮಾಣ ಪತ್ರ ಹಾಗೂ ಪದಕ ಮಗುವಿಗೆ ಲಭಿಸಿದೆ.
ಮೈಸೂರಿನ ವಿಜಯನಗರದ ನಾಲ್ಕನೇ ಹಂತದ ನಿವಾಸಿಗಳಾದ ಉಲ್ಲಾಸ್ ಹಾಗೂ ವಿದ್ಯಾಶ್ರೀ ದಂಪತಿಯ ಮಗಳು ದಿಯಾ. ವಾರಗಳ ಹೆಸರು, ತಿಂಗಳುಗಳು, ಕನ್ನಡ ವರ್ಣಮಾಲೆ, ವಿವಿಧ ಹಣ್ಣುಗಳು, ಪ್ರಾಣಿಗಳು, ತರಕಾರಿಗಳು, ಇತಿಹಾಸ ಪ್ರಸಿದ್ಧ ವ್ಯಕ್ತಿಗಳನ್ನು ಕಂಡುಹಿಡಿಯುವುದು ಸೇರಿದಂತೆ ಹಲವು ರೀತಿಯ ಚಟುವಟಿಕೆಗಳನ್ನು ಮಾಡುವ ವಿಡಿಯೋವನ್ನು ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಗೆ ಪೋಷಕರು ಕಳುಹಿಸಿದ್ದರು. ಈ ವಿಡಿಯೋ ಪರಿಶೀಲಿಸಿದ ಅಧಿಕಾರಿಗಳು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಸೂಪರ್ ಟ್ಯಾಲೆಂಟ್ ಕಿಡ್ ದಿಯಾ ಹೆಸರು ಪ್ರಕಟಿಸಿ, ಪೋಸ್ಟ್ ಮೂಲಕ ಪ್ರಮಾಣ ಪತ್ರ ಹಾಗೂ ಪದಕವನ್ನು ಕಳುಹಿಸಿಕೊಟ್ಟಿದ್ದಾರೆ.
ಗಾಂಧೀಜಿ, ಅಂಬೇಡ್ಕರ್ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳನ್ನು ಫೋಟೊಗಳನ್ನು ನೋಡಿ ಕಂಡುಹಿಡಿಯಬಲ್ಲಳು. ದ್ರಾಕ್ಷಿ, ಸೇಬು, ಸೌತೆಕಾಯಿ, ಪಪಾಯಿ, ಬಾಳೆಹಣ್ಣು ಮತ್ತು ತರಕಾರಿಗಳಾದ ಮೆಣಸಿನಕಾಯಿ, ಈರುಳ್ಳಿ ಸೇರಿದಂತೆ ಹಲವು ವಸ್ತುಗಳನ್ನು ಗುರುತಿಸುತ್ತಾಳೆ. ಸಾಕು ಪ್ರಾಣಿಗಳಾದ ಬೆಕ್ಕು, ನಾಯಿ, ಹಸು ಮತ್ತು ಇದರ ಜೊತೆಗೆ ಇಲಿ, ಒಂಟೆ ಸೇರಿದಂತೆ ಹಲವು ಪ್ರಾಣಿಗಳನ್ನು ಕಂಡುಹಿಡಿಯುತ್ತಾಳೆ.
ಫ್ಯಾನ್, ಗಡಿಯಾರ, ಫ್ರಿಡ್ಜ್, ಕನ್ನಡಿಗಳನ್ನು ಗುರುತಿಸುವ ಪುಟಾಣಿ ಹಲವು ವಾಹನಗಳನ್ನು ಗುರುತಿಸುತ್ತಾಳೆ. ಕನ್ನಡ ವರ್ಣಮಾಲೆಯ ಅ ಅಕ್ಷರದಿಂದ ಅಃ ವರೆಗೆ ಹೇಳುತ್ತಾಳೆ. ಒಂದರಿಂದ ಇಪ್ಪತ್ತರವರೆಗೆ ಸಂಖ್ಯೆಗಳನ್ನು ಹೇಳುವ ಪುಟಾಣಿ, ಇಂಗ್ಲಿಷ್ ವರ್ಣಮಾಲೆಯ ಎ ಯಿಂದ ಜಿ ವರೆಗೆ ತೊದಲು ನುಡಿಯಲ್ಲೇ ಹೇಳುತ್ತಾಳೆ.
ಪೋಷಕರ ಮಾತು: "5 ತಿಂಗಳ ಮಗುವಾಗಿದ್ದಾಗಲೇ ದಿಯಾ ತೊದಲು ಮಾತಿನಲ್ಲಿ ಅಪ್ಪ ಎನ್ನುತ್ತಿದ್ದಳು. ಇದನ್ನು ಗಮನಿಸಿದ ನಾನು ಆಟವಾಡುವಾಗ ಆಕೆಗೆ ನಾನಾ ಬಣ್ಣದ ತರಕಾರಿ ಹಾಗೂ ಪ್ರಾಣಿ ಪಕ್ಷಿಗಳ ಆಟದ ಸಾಮಗ್ರಿಗಳನ್ನು ನೀಡಿ ಆಕೆಗೆ ಗುರುತಿಸುವಂತೆ ಹೇಳುತ್ತಿದ್ದೆ. 9 ತಿಂಗಳು ಆಗುವ ವೇಳೆಗೆ ಅಪ್ಪ, ಅಮ್ಮ, ತಾತಾ ಎಂದು ಕರೆಯುತ್ತಿದ್ದಳು. ಆ ನಂತರ ಪ್ರತಿದಿನ ವಿವಿಧ ರೀತಿಯ ಆಟದ ಸಾಮಗ್ರಿಗಳ ಮೂಲಕ ಕಲಿಸುತ್ತಿದ್ದೆವು. ಈಗ ಈಕೆಗೆ ಹದಿನೆಂಟು ತಿಂಗಳು. ಹಣ್ಣು,ತರಕಾರಿ ಸೇರಿದಂತೆ ಹಲವು ಮಹನೀಯರ ಗುರುತು ಕಂಡುಹಿಡಿಯುತ್ತಾಳೆ."
"ಇದರ ಬಗ್ಗೆ ಒಂದು ವಿಡಿಯೋ ಮಾಡಿ ಟ್ಯಾಲೆಂಟೆಡ್ ಕಿಡ್ ಅವಾರ್ಡ್ಗೆ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಿದ್ದೆ. ನಮ್ಮ ಪುಟಾಣಿ ಹೆಸರು ಟ್ಯಾಲೆಂಟೆಡ್ ಕಿಡ್ ಅವಾರ್ಡ್ ಪಟ್ಟಿ ಸೇರಿದೆ. ಈ ಬಗ್ಗೆ ಪ್ರಮಾಣ ಪತ್ರ ಹಾಗೂ ಪದಕ ಪೋಸ್ಟ್ ಮೂಲಕ ಬಂದಿದೆ. ಇದರಿಂದ ನಮಗೆ ಸಂತೋಷವಾಗಿದೆ" ಎಂದು ಈಟಿವಿ ಭಾರತ ಪ್ರತಿನಿಧಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು.
ಇದನ್ನೂ ಓದಿ: ಮೂರು ಆ್ಯಪ್ ಅಭಿವೃದ್ದಿಪಡಿಸಿ ಗಿನ್ನೆಸ್ ದಾಖಲೆ ಬರೆದ 12 ವರ್ಷದ ಬಾಲಕ!