ಮೈಸೂರು: ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1064ನೇ ಜಯಂತ್ಯುತ್ಸವ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಾಗೂ ವಿವಿಧ ಮಠಾಧೀಶರು, ಗಣ್ಯರ ಸಮ್ಮುಖದಲ್ಲಿ ಬುಧವಾರ ಭಕ್ತಿ ಗೌರವಗಳೊಂದಿಗೆ ನಡೆಯಿತು. ಇದೇ ಸಂದರ್ಭದಲ್ಲಿ ವಿವಿಧ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಭಾಗಿಯಾಗಿದ್ದು, ವಿಶೇಷವಾಗಿ ಗಮನ ಸೆಳೆಯಿತು.
ಸನ್ಮಾನ ಸ್ವೀಕರಿಸಿದ ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, "ಕರ್ನಾಟಕ ರಾಜ್ಯ ವಿಭಿನ್ನವಾಗಿದೆ. ಶರಣರ ತತ್ವಗಳಿಂದ ಸ್ಥಾಪಿತವಾದ ಮಠಗಳು ಸಮಾಜಕ್ಕೆ ಅಪಾರ ಸೇವೆ ನೀಡುತ್ತಿವೆ. ಲಕ್ಷಾಂತರ ವಿದ್ಯಾರ್ಥಿಗಳ ಪಾಲಿಗೆ ಕಾಮಧೇನುವಾಗಿದ್ದು ಅಕ್ಷರ, ಆಶ್ರಯ, ಅನ್ನ ನೀಡಿ ಅವರ ಬದುಕಿಗೆ ದಾರಿದೀಪವಾಗಿವೆ. ಬಸವಣ್ಣನವರು ಬೇರೆ ಬೇರೆ ರಾಜ್ಯಗಳಿಂದ ಬಂದಂತಹ ಶರಣರಿಗೆ ಕನ್ನಡ ಕಲಿಸಿ, ಕನ್ನಡದಲ್ಲೇ ವಚನಗಳನ್ನು ಬರೆಸುತ್ತಿದ್ದರು. ಇಂದಿಗೂ ಮಠಗಳು ಶರಣರ ತತ್ವಗಳನ್ನು ನಿರಂತರವಾಗಿ ಪಾಲಿಸಿಕೊಂಡು ಬರುತ್ತಿವೆ" ಎಂದರು.
ಮೈಸೂರು ಮಿತ್ರ ದಿನಪತ್ರಿಕೆಯ ಪ್ರಧಾನ ಸಂಪಾದಕ ಡಾ.ಕೆ.ಬಿ.ಗಣಪತಿ ಮಾತನಾಡಿ, "ಸುತ್ತೂರು ಶ್ರೀಕ್ಷೇತ್ರ ಸಾಧು, ಸಂತರು ಮತ್ತು ಋಷಿಮುನಿಗಳ ತಪೋಭೂಮಿ. ಸುತ್ತೂರು ಮಠವು ರಾಜ್ಯವು ಅತಿವೃಷ್ಠಿ, ಅನಾವೃಷ್ಠಿ ಹಾಗೂ ಪ್ರಕೃತಿ ವಿಕೋಪದಂತಹ ಸಂಕಷ್ಟದ ಸಂದರ್ಭಗಳಲ್ಲಿ ನಿರಂತರವಾಗಿ ನೆರವಿನ ಹಸ್ತ ನೀಡುತ್ತಾ ಬಂದಿರುವುದು ಶ್ಲಾಘನೀಯ" ಎಂದು ತಿಳಿಸಿದರು.
ಸಾಹಿತಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್, ನಾಡೋಜ ವೂಡೇ ಪಿ.ಕೃಷ್ಣ, ಪ್ರೊ.ಸಿ.ನಾಗಣ್ಣ, ಅರವಿಂದ ಜತ್ತಿ, ಜಾವಗಲ್ ಶ್ರೀನಾಥ್, ಎಸ್.ಷಡಕ್ಷರಿ, ಬೆಂಗಳೂರಿನ ಮಿಥಿಕ್ ಸೊಸೈಟಿಯ ನಾಗರಾಜು ಮಾತನಾಡಿದರು. ಡಾ.ಸಿ.ರಾಮಚಂದ್ರ, ಕೆ.ಟಿ.ಚಂದು, ಪಿ.ಗಂಗಾಧರ ಸ್ವಾಮಿ, ಮಹದೇವು, ಗೌರಯ್ಯ ಹಾಗೂ ಜವರಪ್ಪ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಆದಿಜಗದ್ಗುರುಗಳ ಉತ್ಸವಮೂರ್ತಿಯ ಮೆರವಣಿಗೆಯು ಮಂಗಳವಾದ್ಯ, ಎನ್‌ಸಿಸಿ, ವೀರಗಾಸೆ ಹಾಗೂ ಜನಪದ ಕಲಾ ತಂಡಗಳೊಂದಿಗೆ ಸುತ್ತೂರಿನ ಪ್ರಮುಖ ಬೀದಿಗಳಲ್ಲಿ ನೆರವೇರಿತು.
ಜ್ಯೋತಿಷ ಮಹಾಮಹೋಪಾಧ್ಯಾಯ ಡಾ.ಕೆ.ಜಿ.ಪುಟ್ಟಹೊನ್ನಯ್ಯ ಸಿದ್ಧಪಡಿಸಿರುವ ಸುತ್ತೂರು ಶ್ರೀ ಶಿವರಾತ್ರೀಶ್ವರ ಪಂಚಾಂಗ ಹಾಗೂ 2024ನೇ ಇಸವಿಯ ಜೆಎಸ್‌ಎಸ್ ಮಹಾವಿದ್ಯಾಪೀಠ ಹೊರತಂದಿರುವ ಕನ್ನಡ ಮತ್ತು ಇಂಗ್ಲಿಷ್ ಟೇಬಲ್ ಕ್ಯಾಲೆಂಡರ್‌ಗಳನ್ನು ಬಿಡುಗಡೆಗೊಳಿಸಲಾಯಿತು. ಬೆಂಗಳೂರು ಚೈತನ್ಯ ಶಾಲೆಯ ವಿದ್ಯಾರ್ಥಿನಿ ಹಾಗೂ ಕವಿಯತ್ರಿಯಾದ ನೇತ್ರಾ ಕೆ.ಪರ್ಲ್‌ಸನ್ ರಚಿಸಿರುವ ಒನ್ ಮೈಂಡ್ ಗೇಮ್ ಕೃತಿ ಬಿಡುಗಡೆ ಮಾಡಲಾಯಿತು.
ಸಮಾರಂಭದಲ್ಲಿ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್, ನೂರಕ್ಕೂ ಹೆಚ್ಚು ಮಠಾಧೀಶರು, ಮಾಜಿ ಸಂಸದರಾದ ಎಂ.ಶಿವಣ್ಣ, ಮಾಜಿ ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕರಾದ ಬಾಲರಾಜು ಸೇರಿದಂತೆ ಅನೇಕ ಶ್ರೀಗಳು ಮತ್ತು ಗಣ್ಯರು ಭಾಗಿಯಾಗಿದ್ದರು.
ಇದನ್ನೂ ಓದಿ: ದೇವಾಲಯಗಳಲ್ಲಿ ವಸ್ತ್ರ ಸಂಹಿತೆ: ರಾಮಲಿಂಗಾರೆಡ್ಡಿಗೆ ಮನವಿ ಸಲ್ಲಿಸಲು ಮುಂದಾದ ಧಾರ್ಮಿಕ ಸಂಸ್ಥೆ