ಮೈಸೂರು: 100 ಅಡಿ ಎತ್ತರದ ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣಕ್ಕೆ ನಮ್ಮ ಸಮುದಾಯದ ಎಲ್ಲರ ಜೊತೆ ಚರ್ಚಿಸಲಾಗಿದೆ. ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹೇಳಿದರು.
ಈ ಕುರಿತಂತೆ ಮೈಸೂರಿನಲ್ಲಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಪ್ರತಿಮೆ ಸ್ಥಾಪನೆಗೆ ನಮ್ಮ ಸಮುದಾಯದ ಮುಖಂಡರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಕಂಚು ಅಥವಾ ಬೇರೆ ಯಾವ ವಸ್ತುವಿನಲ್ಲಿ ಪ್ರತಿಮೆ ತಯಾರಿಸಬೇಕು ಎಂಬ ಬಗ್ಗೆ ತೀರ್ಮಾನಿಸಲಾಗುವುದು ಎಂದರು.
ನಮ್ಮ ಧರ್ಮ ಗ್ರಂಥದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಇಲ್ಲ ನಿಜ. ಆದರೆ, ಟಿಪ್ಪುವಿನ ಸಾಧನೆ, ಜನಪರ ಕಾರ್ಯಕ್ರಮ ಹಾಗೂ ಅವರ ಧೈರ್ಯ ಎಲ್ಲವೂ ಇತಿಹಾಸದಲ್ಲಿದೆ. ಇದನ್ನು ಬಿಂಬಿಸಲು ಟಿಪ್ಪು ಪ್ರತಿಮೆ ನಿರ್ಮಾಣ ಅವಶ್ಯಕ. ಈ ಬಗ್ಗೆ ನಮ್ಮ ಧರ್ಮ ಗುರುಗಳ ಜತೆ ಚರ್ಚಿಲಾಗಿದೆ ಎಂದರು.
ನಾಳೆ ರಂಗಾಯಣದ ನಿರ್ದೇಶಕ ಕಾರ್ಯಪ್ಪ ಅವರ 'ಟಿಪ್ಪುವಿನ ಕನಸುಗಳು' ಕೃತಿ ಬಿಡುಗಡೆಗೆ ನಮ್ಮ ಅಭ್ಯಂತರ ಇಲ್ಲ. ಆದರೆ ನಾಟಕ ಪ್ರದರ್ಶನ ಮಾಡದಂತೆ ನ್ಯಾಯಾಲಯದಲ್ಲಿ ಸೋಮವಾರ ಸ್ಟೇ ತರಲು ನಿರ್ಧರಿಸಲಾಗಿದೆ ಎಂದು ಇದೇ ವೇಳೆ ವಿವರಿಸಿದರು.
ಇದನ್ನೂ ಓದಿ: ಟಿಪ್ಪು ಪ್ರತಿಮೆ ದೆಹಲಿಯ ಸಂಸತ್ ಭವನದ ಮುಂದೆ ಸ್ಥಾಪಿಸಬೇಕು: ವಾಟಾಳ್ ನಾಗರಾಜ್