ಮೈಸೂರು: ಮಹಾನಗರ ಪಾಲಿಕೆಯಲ್ಲಿ ದಸರಾ ಹಾಗೂ ವಿವಿಧ ಕಾಮಗಾರಿಗಳಡಿ ಕೈಗೊಂಡ ಕೆಲಸಗಳ ಹಣವನ್ನು ಗುತ್ತಿಗೆದಾರರಿಗೆ ಪಾವತಿಸುವುದು ಬಾಕಿ ಇದ್ದು, ಬಿಲ್ ಪಾವತಿಸಲು 10 ಕೋಟಿ ರೂ. ಸರ್ಕಾರದಿಂದ ಬಿಡುಗಡೆ ಮಾಡಲಾಗುವುದು ಎಂದು ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಮೈಸೂರು ಮಹಾನಗರ ಪಾಲಿಕೆಯಲ್ಲಿ ಇಂದು ನಡೆದ ಗುತ್ತಿಗೆದಾರರ ಸಭೆಯನ್ನುದ್ದೇಶಿಸಿ ಮಾತನಾಡಿ ಅವರು, ಮಾನ್ಯ ಮುಖ್ಯಮಂತ್ರಿಗಳು ಹಾಗೂ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಸಲಾಗುವುದು ಎಂದರು. ಗುತ್ತಿಗೆದಾರರ ಬಿಲ್‍ಗಳನ್ನು ಶೀಘ್ರದಲ್ಲೇ ಪಾವತಿಸಲು ಕ್ರಮ ವಹಿಸಲಾಗುವುದು. ಈ ಬಾರಿಯ ದಸರಾ ಕಾಮಗಾರಿಗಳನ್ನು ಪ್ರಾರಂಭಿಸಿ ಯಾವುದೇ ತೊಂದರೆಯಾಗದಂತೆ ಮುಗಿಸಿ ವಿಶ್ವವಿಖ್ಯಾತಿ ದಸರಾವನ್ನು ಆಚರಿಸಲು ಸಹಕರಿಸುವಂತೆ ಗುತ್ತಿಗೆದಾರರಿಗೆ ತಿಳಿಸಿದರು.
ನಗರಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ನೀಡುವುದರಲ್ಲಿ ಗುತ್ತಿಗೆದಾರರ ಪಾತ್ರ ಮುಖ್ಯವಾಗಿದೆ. ಮೈಸೂರು ನಗರ ಸ್ವಚ್ಛತೆಯಿಂದ ಇರಬೇಕಾದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವೆ ಸಮನ್ವಯತೆ ಇರಬೇಕು. ಮೈಸೂರಿನ ಹೊರ ವರ್ತುಲ ರಸ್ತೆಯ ಎರಡು ಬದಿಯ ಡ್ರೈನೇಜ್ ಸ್ವಚ್ಛತೆ ಮಾಡಬೇಕು. ರಸ್ತೆ ಬದಿಯ ಪಾರ್ಥೇನಿಯಂ ಗಿಡಗಳನ್ನು ತೆಗೆಯಬೇಕು. ದಸರಾಕ್ಕೆ ಆಗಮಿಸುವ ಪ್ರವಾಸಿಗರಿಗೆ ಮೈಸೂರಿನ ಸ್ವಚ್ಛತೆ ಆಕರ್ಷಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ತಿಳಿಸಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಚಂದ್ರಶೇಖರ್, ಪಾಲಿಕೆ ವತಿಯಿಂದ ಹಲವು ಬಿಲ್ಗಳು ಪಾವತಿಯಾಗಿಲ್ಲ. ಗುತ್ತಿಗೆದಾರರು ಸಂಕಷ್ಟದಲಿದ್ದಾರೆ ಎಂದು ಹೇಳಿದರು. ಇದಕ್ಕೆ ಸಚಿವರು ಸ್ಪಂದಿಸಿ ಮಾರ್ಚ್ ಅಂತ್ಯದೊಳಗೆ ಹಣ ಬಿಡುಗಡೆ ಮಾಡಿಸಿಕೊಡುವ ಭರವಸೆ ನೀಡಿದರು.