ಮಂಡ್ಯ : ಗಣಪತಿ ನಿಮಜ್ಜನ ಮೆರವಣಿಗೆ ವೇಳೆ ಮನೆ ಮುಂದೆ ಬಂದು ಅನುಚಿತವಾಗಿ ವರ್ತಿಸಿದರು ಎಂದು ಆರೋಪಿಸಿ ನಾಲ್ವರು ಯುವಕರನ್ನು ಮನೆಯಲ್ಲಿ ಕೈಕಾಲು ಕಟ್ಟಿಹಾಕಿ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ನಡೆದಿದೆ. ಹಲ್ಲೆ ಮಾಡಿದ ಆರೋಪದ ಮೇಲೆ ಕೆ.ಆರ್. ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ಪಿ.ಬಿ.ಮಂಚನಹಳ್ಳಿಯ ನಾಗೇಗೌಡ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಪಿ.ಬಿ.ಮಂಚನಹಳ್ಳಿ ಗ್ರಾಮದ ಧರ್ಮರಾಜ್, ದೊರೆಸ್ವಾಮಿ, ಎಚ್.ಡಿ.ದರ್ಶನ್, ಎಂ.ಎನ್. ಕುಮಾರ್ ಗಾಯಗೊಂಡ ಯುವಕರು.
ಡ್ಯಾನ್ಸ್ ಮಾಡಲು ನಿರಾಕರಣೆ: ರೈತ ಮುಖಂಡ ನಾಗೇಗೌಡ ಹಾಗೂ ಕಾಂತರಾಜು, ಪ್ರಭಾಕರ್, ಸುಭಾಷ್, ಶಿವ, ನಂದೀಶ್, ಬಾಲರಾಜ್, ಮಂಜೇಗೌಡ, ಸತೀಶ್ ಇತರರು ಸೇರಿ ತಮ್ಮ ಮನೆ ಬಳಿ ಯುವಕರು ಡ್ಯಾನ್ಸ್ ಮಾಡಲು ನಿರಾಕರಿಸಿದ್ದರು. ಮಾತುಕತೆಯಲ್ಲಿ ಸಮಸ್ಯೆ ಬಗೆ ಹರಿಸುವುದಾಗಿ ಕರೆಸಿ ಮನೆಯಲ್ಲಿ ಹಗ್ಗದಿಂದ ಕೈಕಾಲು ಕಟ್ಟಿ ಮನಸೋಯಿಚ್ಛೆ ಹಲ್ಲೆ ಮಾಡಲಾಗಿದೆ. ಅಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಮನೆಯಲ್ಲಿ ಚೀರಾಟ ಕೇಳಿ ಗ್ರಾಮಸ್ಥರು ಬಂದು ಯುವಕರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಪ್ರಶ್ನಿಸಿದ್ದಾರೆ.
ಆಸ್ಪತ್ರೆಗೆ ಸೇರಿಸಿದ ಪೊಲೀಸರು: ಗ್ರಾಮಸ್ಥರ ಮಾಹಿತಿ ಮೇಲೆ ಯುವಕರನ್ನು ಬಿಡಿಸಲು ಬಂದ ಪೊಲೀಸರ ಬಳಿ, ನಮ್ಮ ಮನೆ ಮೇಲೆ ದಾಳಿ ಮಾಡಲು ಬಂದಿದ್ದರು. ಅದಕ್ಕೆ ಯುವಕರನ್ನು ಕಟ್ಟಿ ಹಾಕಿರುವುದಾಗಿ ನಾಗೇಗೌಡ ತಿಳಿಸಿದ್ದಾರೆ. ಪೊಲೀಸರು ಕೈಕಾಲು ಕಟ್ಟಿ ಹಾಕಿದ್ದ ಯುವಕರನ್ನು ಬಿಡಿಸಿ, ಗಾಯಗೊಂಡು ಯುವಕರಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಮನೆಗೆ ಬಾಗಿಲು ಬಡಿದು ಕರುಕುಳ : ಯುವಕರನ್ನು ಕಟ್ಟಿಹಾಕಿದ್ದು ಮನೆಬಾಗಿಲು ಬಡಿದು ಕಿರುಕುಳ ನೀಡುತ್ತಿದ್ದರು ಎಂಬ ಕಾರಣಕ್ಕೆ. ಅವರು ನೀಡಿದ ಕಿರುಕುಳ ತಾಳಲಾರದೇ ಮನೆಯಲ್ಲಿ ಬಂಧಿಸಿ ಕಟ್ಟಿಹಾಕಿದ್ದೇವೆ ಎಂದು ಆನಗೇಗೌಡ ಸ್ಪಷ್ಟನೆ ನೀಡಿದ್ದಾರೆ.
ಘಟನೆ ಸಂಬಂಧ ಯುವ ಮುಖಂಡ ಎಂ.ಎನ್. ಕುಮಾರ್ ನೀಡಿದ ದೂರಿನ ಮೇರೆಗೆ ಕೆ.ಆರ್.ಪೇಟೆ ಪಟ್ಟಣ ಪೊಲೀಸರು ಯುವಕರ ಕೈಕಾಲು ಕಟ್ಟಿ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇರೆಗೆ ರೈತ ಮುಖಂಡ ನಾಗೇಗೌಡ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ನಾಲ್ವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಆದೇಶ ನೀಡಿದ್ದಾರೆ.
ಇದನ್ನೂ ಓದಿ : ಮಕ್ಕಳ ಕಳ್ಳರೆಂದು ಶಂಕಿಸಿ ಸಾಧುಗಳ ಮೇಲೆ ಹಲ್ಲೆ.. ಗ್ರಾಮಸ್ಥರ ಕ್ರಮಕ್ಕೆ ಖಂಡನೆ - ವಿಡಿಯೋ