ಮಂಡ್ಯ: ಬಡವರಿಗೆ ಉತ್ತಮ ಆಹಾರ ಸಿಗಲಿ ಅಂತಾ ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದೆ. ಆದರೆ, ಈಗ ಸರ್ಕಾರ ಪೂರೈಕೆ ಮಾಡುತ್ತಿರುವ ಅಕ್ಕಿ ಕಳಪೆಯಾಗಿದ್ದು, ಅದರಲ್ಲಿ ಹುಳುಗಳು ಕಂಡು ಬರುತ್ತಿರುವ ಹಿನ್ನೆಲೆ ಫಲಾನುಭವಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮದ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ನೀಡಿದ ಅನ್ನಭಾಗ್ಯದ ಅಕ್ಕಿಯಲ್ಲಿ ಹುಳುಗಳ ದರ್ಶನವಾಗಿದೆ. ಇಂದು ಬೆಳಗ್ಗೆಯಿಂದ ಅಕ್ಕಿ ನೀಡಲಾಗುತ್ತಿದ್ದು, ಅವು ತಿನ್ನಲು ಯೋಗ್ಯವಾಗಿಲ್ಲ. ಆದರೂ ವಿತರಣೆ ಮಾಡಲಾಗುತ್ತಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಕುರಿತಂತೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕಳಪೆ ದರ್ಜೆಯ ಅಕ್ಕಿ ನೀಡಿದರೆ ಬಡವರು ತಿನ್ನುವುದಾದರೂ ಹೇಗೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.