ಮಂಡ್ಯ: ಸಂಕಷ್ಟದ ಕಾಲದಲ್ಲಿ ಕೈ ಹಿಡಿಯೋದು ಮಹಿಳೆಯರು ಎಂಬುದನ್ನು ಕೆಲ ಮಹಿಳಾ ಸಂಘಗಳು ಸಾಬೀತು ಮಾಡಿವೆ. ಸದ್ದಿಲ್ಲದೇ, ಯಾವುದೇ ಪ್ರಚಾರ ಪಡೆಯದೇ ಕೊರೊನಾದಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಜಿಲ್ಲೆಯ ನೂರಾರು ಮಹಿಳೆಯರು ಸಹಾಯ ಹಸ್ತ ಚಾಚುತ್ತಿದ್ದಾರೆ.
ತಮ್ಮದೇ ಸಂಘಟನೆ ಕಟ್ಟಿಕೊಂಡು, ಯಾರಿಗೂ ಹೇಳಿಕೊಳ್ಳದೇ ಮಹಿಳಾ ಮಣಿಗಳು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಸದ್ದಿಲ್ಲದೇ ಕಾರ್ಯ ನಿರ್ವಹಿಸುತ್ತಿರುವ ಹಲವು ಸಂಘ-ಸಂಸ್ಥೆಗಳ ಮಹಿಳೆಯರು ಬಡವರಿಗೆ ದಿನಸಿ, ಆಹಾರ ಪದಾರ್ಥ, ಸ್ಯಾನಿಟೈಜರ್, ಮಾಸ್ಕ್, ತರಕಾರಿ ಸೇರಿದಂತೆ ದಿನ ಬಳಕೆಯ ವಸ್ತುಗಳನ್ನು ನೀಡುತ್ತಾ ಬಂದಿದ್ದಾರೆ.
ಅನನ್ಯ ಸಂಸ್ಥೆಯ ಅನುಪಮ, ಮಡಿಲು ಸಂಸ್ಥೆಯ ಅರುಣ ಕುಮಾರಿ, ಮಹಿಳಾ ಮುನ್ನಡೆಯ ಪೂರ್ಣಿಮಾ, ಗೌರಿ ವೆಂಕಟೇಶ್, ಸಿಪಿಐಎಂನ ಸಿ. ಕುಮಾರಿ, ಜನವಾದಿಯ ದೇವಿ ಸೇರಿದಂತೆ ಹಲವು ಮಹಿಳೆಯರು ಬಡ ಜನರ ಸಹಾಯಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ.
ಕಳೆದ 47 ದಿನಗಳಿಂದಲೂ ಆಹಾರ ಪದಾರ್ಥಗಳನ್ನು ಉಚಿತವಾಗಿ ನೀಡುತ್ತಾ ಬಂದಿದ್ದಾರೆ. ಅವರಿಗೆ ದೂರವಾಣಿ ಕರೆ ಮಾಡಿದರೆ ಸಾಕು ಪರಿಸ್ಥಿತಿಯನ್ನು ಅವಲೋಕನ ಮಾಡಿ ಸಹಾಯ ಹಸ್ತ ಚಾಚುತ್ತಿದ್ದಾರೆ. ರಸ್ತೆ ಬದಿಯಲ್ಲಿ ನಿರ್ಗತಿಕರು, ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಸೇರಿದಂತೆ ಬಡ ಮಹಿಳೆಯರಿಗೂ ಸಹಾಯ ಮಾಡುತ್ತಾ ಬಂದಿದ್ದಾರೆ.
ರಾಜಕಾರಣ ಹೊರತು ಪಡಿಸಿ ಸಹಾಯ ಹಸ್ತ ಚಾಚಿರುವ ಮಹಿಳಾ ಸಾಧಕರಿಗೆ ಜಿಲ್ಲೆಯ ಹಲವು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಕಾರ್ಯಕ್ರಮ ಮುಂದೆಯೂ ನಡೆಯಲಿ, ಪ್ರಚಾರದ ಗೀಳು ಇಲ್ಲದೆ ಮುಂದೆ ನಿಂತು ಸಹಾಯ ಮಾಡುತ್ತಿರುವ ಮಹಿಳೆಯರಿಗೆ ನಮ್ಮದೊಂದು ಸಲಾಮ್ ಎನ್ನತ್ತಿದೆ ಮಂಡ್ಯ ಜಿಲ್ಲೆ.