ಮಂಡ್ಯ: ಕೋವಿಡ್ ಸೋಂಕಿಗೆ ತುತ್ತಾಗಿದ್ದ ಗರ್ಭಿಣಿ ಮಗುವಿಗೆ ಜನ್ಮ ನೀಡಿದ ಎರಡು ದಿನಗಳ ನಂತರ ಮೃತಪಟ್ಟ ಘಟನೆ ಮದ್ದೂರು ತಾಲೂಕಿನ ಅರೆತಿಪ್ಪೂರು ಗ್ರಾಮದಲ್ಲಿ ನಡೆದಿದೆ.
ಮದ್ದೂರು ತಾಲೂಕಿನ ಅರೆತಿಪ್ಪೂರು ಗ್ರಾಮದ ನಿವಾಸಿ ಮನೋಹರ್ ಎಂಬುವವರ ಪತ್ನಿ ಗುಣಶ್ರೀ (33) ಮೃತಪಟ್ಟವರು. ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜಿನ ಉಪನ್ಯಾಸಕಿಯಾಗಿದ್ದ ಗುಣಶ್ರೀ, ನಾಲ್ಕು ವರ್ಷಗಳ ಹಿಂದೆ ಅರೆತಿಪ್ಪೂರು ಗ್ರಾಮದ ಮನೋಹರ ಅವರೊಂದಿಗೆ ವಿವಾಹವಾಗಿದ್ದರು.
ಗರ್ಭಿಣಿಯಾಗಿದ್ದ ಗುಣಶ್ರೀಗೆ ಏಳು ತಿಂಗಳು ತುಂಬಿದ್ದು, ಕೊರೊನಾ ಸೋಂಕು ತಗುಲಿತ್ತು. ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಅಲ್ಲಿಂದ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ವೈದ್ಯರು ಮಹಿಳೆ ಪ್ರಾಣಕ್ಕೆ ಅಪಾಯವಿದೆ ಎಂದು ಹೇಳಿ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದರು. ಹೆರಿಗೆಯಾದ ಎರಡು ದಿನಗಳ ಬಳಿಕ ಅಂದರೆ ನಿನ್ನೆ ಮೃತಪಟ್ಟಿದ್ದಾರೆ. ಸದ್ಯ ಮಗು ಆರೋಗ್ಯವಾಗಿದೆ.
ಇದನ್ನೂ ಓದಿ: 10 ಮಂದಿ ಸೋಂಕಿತ ಗರ್ಭಿಣಿಯರಿಗೆ ಸಹಜ ಹೆರಿಗೆ ಮಾಡಿಸಿದ ಸಿಂಧನೂರು ತಾಲೂಕು ಆಸ್ಪತ್ರೆ ಸಿಬ್ಬಂದಿ
ನನ್ನ ಪತ್ನಿ 7 ತಿಂಗಳ ಗರ್ಭಿಣಿಯಾಗಿದ್ದು, ಕೊರೊನಾ ಸೋಂಕು ತಗುಲಿತ್ತು. ಮೊದಲು ಖಾಸಗಿ ಆಸ್ಪತ್ರೆಗೆ ದಾಖಲಿಸಿದೆ. ಆದರೆ, ಅಲ್ಲಿ ಉತ್ತಮ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ವಹಿಸಿದರು. ತದ ನಂತರ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿದೆ. ಅಲ್ಲಿನ ವೈದ್ಯರು ನನ್ನ ಪತ್ನಿ ಉಳಿಸಲು ಶ್ರಮ ಪಟ್ಟರು. ಆದರೆ ಅಷ್ಟರಲ್ಲಿ ಆಕೆಯ ಸ್ಥಿತಿ ಗಂಭೀರವಾಗಿ, ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದರು. ಇದೀಗ ಮೃತಪಟ್ಟಿದ್ದಾರೆ ಎಂದು ಪತಿ ಮನೋಹರ ತಿಳಿಸಿದ್ದಾರೆ.