ಮಂಡ್ಯ: ಅನರ್ಹ ಶಾಸಕರ ವಿಚಾರವಾಗಿ ಸುಪ್ರಿಂಕೋರ್ಟ್ ತೀರ್ಪು ಏನೇ ಬರಲಿ ರಾಜಕೀಯ ಪಕ್ಷಗಳು ಉಪಚುನಾವಣೆ ಸಿದ್ಧತೆಯಲ್ಲಿವೆ. 17 ಕ್ಷೇತ್ರಗಳಿಗೆ ಕಾಂಗ್ರೆಸ್ ಉಸ್ತುವಾರಿ ನೇಮಕ ಮಾಡಿದೆ. ನಮಗೂ ಉಸ್ತುವಾರಿ ನೀಡಲಾಗಿದೆ. ಒಂದು ವಾರದಲ್ಲಿ ಸಭೆ ಕರೆದು ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ತಿಳಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿ, ಒಂದು ವಾರದಲ್ಲಿ ಕೆ.ಆರ್.ಪೇಟೆ ಸ್ಥಳೀಯ ಮುಖಂಡರ ಅಭಿಪ್ರಾಯ ಸಂಗ್ರಹ ಮಾಡಲಾಗುವುದು. ಒಂದೂವರೆ ವರ್ಷ ಒಳ್ಳೆಯದೋ ಕೆಟ್ಟದ್ದೋ ಅಧಿಕಾರ ಅನುಭವಿಸಿದ್ದೇವೆ. ಮೈತ್ರಿ ಮಾಡಿಕೊಂಡರೂ ಅಸಮಾಧಾನವಿಲ್ಲ. ಮೈತ್ರಿಗೆ ನಮ್ಮ ವಿರೋಧವಿಲ್ಲ. ನಾವು ಮಧ್ಯೆ ಪ್ರವೇಶ ಮಾಡಿ ಬೇಡ ಎಂದು ಹೇಳುವುದು ಸೂಕ್ತವಲ್ಲ. ಮೈತ್ರಿ ಮಾಡಿಕೊಳ್ಳುವುದು ಅವರಿಗೆ ದೊಡ್ಡವರಿಗೆ ಬಿಟ್ಟ ವಿಚಾರ ಎಂದರು.
ಜೆಡಿಎಸ್ ನಾಯಕರು ಜಿಲ್ಲೆಗೆ ಯಾವ ರೀತಿ ಅಭಿವೃದ್ಧಿ ಮಾಡಿದ್ದಾರೆ ಎಂಬುದು ಕಾವೇರಿ ನೀರು ಬಿಡುಗಡೆ ಸಂದರ್ಭವೇ ಸಾಕ್ಷಿ. ಚುನಾವಣೆ ಸಂದರ್ಭದಲ್ಲಿ ನೀರು ಬಿಟ್ಟರು. ಸೋಲಿನ ನಂತರ ಅಂದಿನ ಸಿಎಂ ಕುಮಾರಸ್ವಾಮಿ ಕೇಂದ್ರಕ್ಕೆ ಹೋಗಿ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವರು ಆಯೋಗದ ನಿರ್ಧಾರ ಕೇಳದೇ ನೀರನ್ನು ಬಿಟ್ಟರು. ಇದರಲ್ಲೇ ಗೊತ್ತಾಗುತ್ತೆ ಅವರಿಗೆ ಮಂಡ್ಯದ ಮೇಲೆ ಎಷ್ಟು ಸಿಟ್ಟಿದೆ ಅನ್ನೋದು ಎಂದು ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಎಸ್‌ವೈ ಬಗ್ಗೆ ಮೆಚ್ಚುಗೆ:
ಯಡಿಯೂರಪ್ಪ ಓರ್ವ ಹೋರಾಟಗಾರ. ಹೋರಾಟ ಮಾಡಿಕೊಂಡು ಬಂದವರು. 105 ಸೀಟು ಗೆದ್ದರೂ ಸಿಎಂ ಆಗಲು ಆಗಲಿಲ್ಲ. 17 ಜನ ಯಾವ ಕಾರಣಕ್ಕೆ ಹೋದರೋ ಗೊತ್ತಿಲ್ಲ. ಯಡಿಯೂರಪ್ಪಗೆ ಅವಕಾಶ ಸಿಕ್ಕಿದೆ. ನಮ್ಮ ಜಿಲ್ಲೆಯ ಓರ್ವ ಮಗ ಸಿಎಂ ಆಗಿದ್ದಾರೆ. ಮತ್ತೊಮ್ಮೆ ಅವಕಾಶ ಸಿಗೋದು ಕಡಿಮೆ. ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಯಡಿಯೂರಪ್ಪಗೆ ಮನವಿ ಮಾಡುವುದರಲ್ಲಿ ತಪ್ಪು ಏನಿದೆ ಎಂದು ಪ್ರಶ್ನೆ ಮಾಡಿದರು.