ಮಂಡ್ಯ: ಸ್ಪೀಕರ್ ರಮೇಶ್ ಕುಮಾರ್ ತಮಗೆ ಬಂದ ದೂರು ಹಾಗೂ ದಾಖಲೆಗಳ ಆಧಾರದ ಮೇಲೆ ಸಮರ್ಪಕ ತೀರ್ಪು ನೀಡಿದ್ದಾರೆ. ಅನರ್ಹಗೊಂಡಿರುವ ಶಾಸಕರು ಸರ್ವೋಚ್ಚ ನ್ಯಾಯಾಲಯದಲ್ಲಿ ಸ್ಪೀಕರ್ ತೀರ್ಪನ್ನು ಪ್ರಶ್ನಿಸಿ ನ್ಯಾಯ ಪಡೆಯಬಹುದು ಎಂದು ಮಾಜಿ ಸ್ಪೀಕರ್ ಕೆ.ಆರ್ ಪೇಟೆ ಕೃಷ್ಣ ಹೇಳಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂದಿನ ರಾಜಕೀಯ ಸಂದಿಗ್ಧತೆ ಹಾಗೂ ಮೈತ್ರಿ ಸರ್ಕಾರದ ಪತನಕ್ಕೆ ಸಿದ್ಧರಾಮಯ್ಯ ಮತ್ತು ದೇವೇಗೌಡರೇ ನೇರ ಕಾರಣರಾಗಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ದೇವೇಗೌಡರೇ ಸದನದ ದಿಕ್ಕು ತಪ್ಪಿಸಿ ಅಡ್ಡ ದಾರಿ ಹಿಡಿದು ಶಾಸಕಾಂಗದ ನಾಯಕರಾಗಿದ್ದ ಕುಮಾರಸ್ವಾಮಿ ಅವರನ್ನು ಅನರ್ಹಗೊಳಿಸುವಂತೆ ತಿಳಿಸಿದ್ದರು. ಆದರೆ ನಾನು ನನ್ನ ಮನಸಾಕ್ಷಿಗೆ ಅನುಗುಣವಾಗಿ ತೀರ್ಪು ನೀಡಿದೆ ಎಂದು ಹಳೆಯ ಪ್ರಕರಣವನ್ನು ನೆನದರು.
ಇಂದು ಚುನಾವಣೆ ನಡೆದರೆ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಜೆಡಿಎಸ್ 20 ಹಾಗೂ ಕಾಂಗ್ರೆಸ್ 40ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ. ಸಮ್ಮಿಶ್ರ ಸರ್ಕಾರದ ರಚನೆಯ ಸಂದರ್ಭದಲ್ಲಿ ಎರಡೂವರೆ ವರ್ಷ ಸಮನಾಗಿ ಹಂಚಿಕೊಂಡು ಜೆಡಿಎಸ್ ಮತ್ತು ಕಾಂಗ್ರೆಸ್ ಆಡಳಿತ ನಡೆಸಿದ್ದರೆ ಇಂದಿನ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಅಧ್ಯಕ್ಷೀಯ ಮಾದರಿಯ ಆಡಳಿತವೇ ನಮ್ಮ ರಾಷ್ಟ್ರಕ್ಕೆ ಸೂಕ್ತ. ಎಲ್ಲಾ ರಾಜಕೀಯ ಪಕ್ಷಗಳು ಹಣವಿದ್ದವರಿಗೆ ಮಣೆ ಹಾಕಿ ಕ್ರಿಮಿನಲ್ಗಳನ್ನು ಪೋಷಿಸುತ್ತಿವೆ ಎಂದು ಕಿಡಿಕಾರಿದರು.
ದೋಸ್ತಿಗಳು ಜನತೆ ನೀಡಿದ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು ಜನರ ವಿಶ್ವಾಸ ಗಳಿಸಬಹುದಿತ್ತು. ಮೈತ್ರಿ ಸರ್ಕಾರ ಪತನವಾಗಿರುವ ರೀತಿಯನ್ನು ನೋಡಿದರೆ ಮತ್ತೆ ಜೆಡಿಎಸ್, ಕಾಂಗ್ರೆಸ್ ಪಕ್ಷಗಳು ತಲೆಯಿತ್ತಿ ನಿಲ್ಲುವುದು ಕಷ್ಟವಾಗಲಿದೆ. ಸರ್ಕಾರದ ಮೇಲೆ ಜನತೆ ಇಟ್ಟಿದ್ದ ಭರವಸೆಗಳು, ಆಕಾಂಕ್ಷೆಗಳು ನುಚ್ಚು ನೂರಾಗಿವೆ ಎಂದು ಕೃಷ್ಣ ವಿಷಾದ ವ್ಯಕ್ತಪಡಿಸಿದರು.