ಮಂಡ್ಯ: ನಾರಾಯಣಗೌಡರು ಅಪೇಕ್ಷೆಪಟ್ಟ ಕೆಲಸವೆಲ್ಲ ಸರ್ಕಾರದಿಂದ ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಭಿವೃದ್ಧಿ ಕಾರ್ಯಗಳ ನೆಪದಲ್ಲಿ ಚುನಾವಣಾಸ್ತ್ರ ಪ್ರಯೋಗಿಸಿದ್ದಾರೆ.
ಕೆ.ಆರ್. ಪೇಟೆಯಲ್ಲಿ ಜಿಲ್ಲಾಡಳಿತ ಅಯೋಜಿಸಿದ್ದ ಬೃಹತ್ ಆರೋಗ್ಯ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ, ನಾನು ಜೀವನದಲ್ಲಿ ಅನೇಕ ಶಾಸಕರನ್ನು ನೋಡಿದ್ದೀನಿ. ಆದರೆ, ನಾರಾಯಣಗೌಡರಂಥ ಪ್ರಾಮಾಣಿಕ ಹಾಗೂ ಒಳ್ಳೆಯ ವ್ಯಕ್ತಿಯನ್ನು ನೋಡಿಲ್ಲ. ಅವರು ಹೇಳಿದಂತೆ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಮೆಡಿಕಲ್ ಕಾಲೇಜು ಆರಂಭಿಸಲು ಚರ್ಚೆ ನಡೆಸಿ ಶೀಘ್ರದಲ್ಲಿ ತಾಲೂಕಿಗೆ ಸಿಹಿ ಸುದ್ದಿ ನೀಡಲಾಗುವುದು. ಬಹುಗ್ರಾಮ ಯೋಜನೆ, ನಾಲಾ ಆಧುನೀಕರಣ, ಹೈಟೆಕ್ ಪಾರ್ಕ್, ಆರ್ಟಿಒ ಪ್ರಾದೇಶಿಕ ಕಚೇರಿ ತೆರೆಯಲು ಕೇಳಿದ್ದಾರೆ. ಅವರ ಅಪೇಕ್ಷೆಯಂತೆ ಮಾದರಿ ತಾಲೂಕು ಮಾಡುತ್ತೇನೆ ಎಂದರು.
ಇದಕ್ಕೂ ಮೊದಲು ಅನರ್ಹ ಶಾಸಕ ನಾರಾಯಣಗೌಡ ಮಾತನಾಡಿ, ತಾಲೂಕಿನ ಅಭಿವೃದ್ಧಿ ಬಗ್ಗೆ ಚರ್ಚಿಸಿ 700 ಕೋಟಿ ರೂ ಕೇಳಿದ್ದೆ. ಅವರು 1 ಸಾವಿರ ಕೋಟಿ ರೂ ಕೋಟ್ಟಿದ್ದಾರೆ. ಏತ ನೀರಾವರಿ ಮಾಡಿಕೊಡುವ ಬಗ್ಗೆ ಭರವಸೆ ಕೊಟ್ಟಿದ್ದಾರೆ. ಬಿಎಸ್ವೈ ರೀತಿಯ ರಾಜಕಾರಣಿಯ ಸಹಕಾರ ಪಡೆದು ತಾಲೂಕಿನ ಅಭಿವೃದ್ಧಿ ಮಾಡುತ್ತೇನೆ. ಇಷ್ಟೇ ಅಲ್ಲದೆ ನನ್ನ ವೈಯಕ್ತಿಕ ಆದಾಯದಿಂದಲೂ ಅಭಿವೃದ್ಧಿ ಕೆಲಸಗಳನ್ನು ಮಾಡಲಿದ್ದೇನೆ ಎಂದು ಹೇಳಿದರು.
ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಸಕ್ಕರೆ ಕಾರ್ಖಾನೆಗಳನ್ನು ತೆರೆದು ರೈತರ ಸಮಸ್ಯೆಗಳನ್ನು ಬಗೆಹರಿಸಿ ಎಂದು ಸಿಎಂಗೆ ಮನವಿ ಮಾಡಿದರು.