ಮಂಡ್ಯ: ಲೋಕ ಸಮರ ನಂತರ ಮೊದಲ ಬಾರಿಗೆ ನಿಖಿಲ್ ಕುಮಾರಸ್ವಾಮಿ ಜಿಲ್ಲೆಗೆ ಆಗಮಿಸಿ, ಅನಾರೋಗ್ಯದಿಂದ ಮೃತಪಟ್ಟ ಕಾರ್ಯಕರ್ತನ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಮಳವಳ್ಳಿಯ ಜೆಡಿಎಸ್ ಕಾರ್ಯಕರ್ತ ಸಂತೋಷ್ ಎಂಬುವರು ಇತ್ತೀಚೆಗೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಮೃತ ಸಂತೋಷ್ ಕುಟುಂಬಕ್ಕೆ ಸಾಂತ್ವನ ಹೇಳಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಮೃತ ಕಾರ್ಯಕರ್ತನನ್ನು ನೆನೆದು ನಿಖಿಲ್ ಭಾವುಕರಾಗಿ ನಿಮ್ಮ ಜೊತೆ ನಾ ಇದ್ದೇನೆ ಎಂದು ಧೈರ್ಯ ತುಂಬಿದರು. ಮೃತ ಸಂತೋಷ ತಾಯಿ ಜಯಮ್ಮ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.
ನಂತರ ಮಾತನಾಡಿದ ಅವರು, ಸಂತೋಷ್ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಸ್ವಂತ ದುಡಿಮೆಯಲ್ಲಿ ಜೆಡಿಎಸ್ ಪಕ್ಷ ಕಟ್ಟಲಿಕ್ಕೆ ಕೆಲಸ ಮಾಡಿದವರು. ಸಂತೋಷ್ ಅಗಲಿಕೆ ಜೀರ್ಣಿಸಿಕೊಳ್ಳಲಿಕ್ಕೆ ಆಗ್ತಿಲ್ಲ ಎಂದು ಸಂತೋಷ್ ನೆನೆದು ಕಣ್ಣೀರು ಹಾಕಿದರು.
ಲೋಕಸಭಾ ಚುನಾವಣಾ ಸಂಧರ್ಭದಲ್ಲಿ ಸಂತೋಷ್ ಪ್ರಚಾರದ ವೇಳೆ ನನ್ನ ಹೊತ್ತು ಕುಣಿದಿದ್ರು. ಮಕ್ಕಳನ್ನ ಕಳೆದುಕೊಂಡ ನೋವು ತಂದೆ ತಾಯಿಗೆ ಮಾತ್ರ ಗೊತ್ತಿರುತ್ತೆ. ನಾವು ಏನೆ ಸಾಂತ್ವನ ಹೇಳಿದ್ರು ಸಾಲೋದಿಲ್ಲ. ಸಂತೋಷ್ ತಾಯಿಯ ಕಣ್ಣೀರು ಕಂಡಾಗ ನನಗೆ ದುಃಖ ಉಮ್ಮಳಿಸಿಬಂತು. ನನ್ನ ಕುಟುಂಬ ಸದಸ್ಯರನ್ನ ಕಳೆದುಕೊಂಡಷ್ಟೇ ನನಗೆ ನೋವಾಗಿದೆ. ಸಂತೋಷ್ ಕುಟುಂಬಸ್ಥರ ಜೊತೆ ನಾನು ಸದಾ ಇರುತ್ತೇನೆ. ನನ್ನನ್ನು ಅವರ ಮನೆ ಮಗನಂತೆ ಸಂತೋಷ್ ಕುಟುಂಬ ಭಾವಿಸಲಿ ಎಂದರು.