ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಸಮೀಪ ಕಾರು ಮತ್ತು ಸ್ಕೂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಶಿಕ್ಷಕಿಯರು ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಬಸ್ತಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ನಾಗರತ್ನ (50) ಮತ್ತು ಪಿ.ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಮಂಜುಳಾ (45) ಮೃತರು. ನಾಗರತ್ನ ಸ್ಥಳದಲ್ಲೇ ಸಾವಿಗೀಡಾದರೆ, ಮಂಜುಳಾ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಾಗರತ್ನ ಮತ್ತು ಮಂಜುಳಾ ಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯ ಕರ್ತವ್ಯ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮೈಸೂರು ಕಡೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಪಾಲಹಳ್ಳಿ ಕಡೆಯಿಂದ ಪಟ್ಟಣದ ಕಡೆ ಬರುತ್ತಿದ್ದ ಕಾರು ಇವರಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಕಾರು ಚಾಲಕನ ಅಜಾಗರೂಕತೆಯಿಂದ ಘಟನೆ ನಡೆದಿದೆ ಎಂದು ಸ್ಥಳೀಯರು ದೂರಿದ್ದಾರೆ.
ನಾಗರತ್ನ ಮೂಲತಃ ಕೆ.ಆರ್.ನಗರದವರಾಗಿದ್ದು, ಬಸ್ತಿಪುರದಲ್ಲಿ ವಾಸವಾಗಿದ್ದರು. ಮಂಜುಳಾ ಪಾಂಡವಪುರ ತಾಲೂಕಿನ ಹಿರೀಮರಳಿ ಗ್ರಾಮದವರಾಗಿದ್ದು, ಕುಟುಂಬದೊಂದಿಗೆ ಮೈಸೂರಿನ ಮೇಟಗಹಳ್ಳಿಯಲ್ಲಿ ವಾಸವಾಗಿದ್ದರು.
ಕಾರು ಚಾಲಕನನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಗದಗ: ಬ್ಯಾನರ್ ಕಟ್ಟುವಾಗ ದುರಂತ; ವಿದ್ಯುತ್ ತಗುಲಿ ಮೂವರು ಯುವಕರು ಸಾವು