ಮಂಡ್ಯ: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 12 ರಂದು ಮಂಡ್ಯ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯ ಮರಗಳ ಕೊಂಬೆಗಳನ್ನು ಬೇಕಾಬಿಟ್ಟಿಯಾಗಿ ಕತ್ತರಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ಸಾರ್ವಜನಿಕರ ಆಕ್ರೋಶ: ಮಾರ್ಚ್ 12 ರಂದು ಜಿಲ್ಲೆಗೆ ಆಗಮಿಸುತ್ತಿರುವ ಪ್ರಧಾನಿ, ಅಂದು ಮಧ್ಯಾಹ್ನ 12ಕ್ಕೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿ ದಶಪಥ ಹೆದ್ದಾರಿ ಉದ್ಘಾಟಿಸಲಿದ್ದಾರೆ. ನಂತರ, ನಗರದ ಪ್ರವಾಸಿ ಮಂದಿರದಿಂದ ಕೆಂಪೇಗೌಡ ಉದ್ಯಾನದವರೆಗೆ 1.5 ಕಿ.ಮೀ ರೋಡ್ ಶೋ ನಡೆಸುವರು. ಪ್ರಧಾನಿ ಮೋದಿಯವರಿಗೆ ಭದ್ರತೆ ಕಾರಣ ನೀಡಿ ತಡರಾತ್ರಿ ರಸ್ತೆಯ ಎರಡೂ ಬದಿಯ ಮರಗಳ ಕೊಂಬೆಗಳನ್ನು ಕತ್ತರಿಸಿದ್ದಾರೆ. "ರಸ್ತೆಗೆ ಬಾಗಿರುವ ಕೊಂಬೆಗಳನ್ನು ಕತ್ತರಿಸಿದ್ದರೆ ಬೇಸರವಾಗುತ್ತಿರಲಿಲ್ಲ. ಆದರೆ, ಮರಗಳ ಅರ್ಧ ಭಾಗವನ್ನೇ ಕಡಿದಿರುವುದು ನೋವುಂಟು ಮಾಡಿದೆ. ಜೀವವಾಯು ನೀಡುತ್ತಿದ್ದ ಈ ಮರಗಳು ಪ್ರಧಾನಿಗೆ ತೊಂದರೆ ನೀಡುತ್ತಿದ್ದವೇ" ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: 'ವಿರೋಧಿಗಳು ಮರ್ ಜಾ ಮೋದಿ ಅಂದ್ರೆ, ಜನತೆ ಮತ್ ಜಾ ಮೋದಿ ಅಂತಿದ್ದಾರೆ'
ಮಂಡ್ಯ ಜಿಲ್ಲಾಧಿಕಾರಿ ಪ್ರತಿಕ್ರಿಯೆ: ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಡ್ಯ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಅವರು "ಪ್ರಧಾನಿ ರ್‍ಯಾಲಿಯಲ್ಲಿ 40 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಒಣಗಿದ್ದ ಕೊಂಬೆ ತೆರವು ಮಾಡುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿದ್ದೆ. ಅವರು ಹೇಗೆ ಕಡಿಸಿದ್ದಾರೆ ಎಂಬುದನ್ನು ಪರಿಶೀಲಿಸುತ್ತೇನೆ" ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಾರ್ಚ್ 12ರಂದು ರಾಜ್ಯಕ್ಕೆ ಮೋದಿ, ಧಾರವಾಡ ಐಐಟಿ ಲೋಕಾರ್ಪಣೆ: ಪ್ರಲ್ಹಾದ್ ಜೋಶಿ
ಅರಣ್ಯ ಇಲಾಖೆಯ ಅಧಿಕಾರಿಗಳ ಸೂಚನೆಯ ಮೇರೆಗೆ ಕೆಳ ಹಂತದ ಸಿಬ್ಬಂದಿ ಹಾಗೂ ಇತರೆ ಕಾರ್ಮಿಕರು ಮರಗಳನ್ನು ಕತ್ತರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮರದ ಕೊಂಬೆಗಳ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸದಾನಂದ ಗೌಡ, "ನಮ್ಮ ಕಡೆಯಿಂದ ಯಾವ ಆದೇಶವನ್ನೂ ಕೊಟ್ಟಿಲ್ಲ. ಅಧಿಕಾರಿಗಳು ನಿನ್ನೆ ಮರಗಳನ್ನು ಟ್ರಿಮ್ ಮಾಡಿದ್ದಾರೆ. ಮರದ ಕಂಟಿಂಗ್ ಮಾಡದ ಹಾಗೇ ವರಿಷ್ಠರು ಆದೇಶ ಕೊಟ್ಟಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದನ್ನು ನಾನು ಸಮರ್ಥನೆ ಮಾಡಿಕೊಳ್ಳಲ್ಲ. ಪಕ್ಷ, ಸರ್ಕಾರದ ಕಡೆಯಿಂದ ಯಾವುದೇ ಆದೇಶ ಮಾಡಿಲ್ಲ. ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ" ಎಂದು ತಿಳಿಸಿದರು.
ಇದನ್ನೂ ಓದಿ: Watch.. ಪೇಟ ತೊಡಿಸಿ, ನೆನಪಿನ ಕಾಣಿಕೆ ಕೊಟ್ಟು ಪಿಎಂ ಮೋದಿಗೆ ಸನ್ಮಾನ.. ಬಿಎಸ್ವೈಗೆ ಶುಭಾಶಯ ಹೇಳಿದ ಪ್ರಧಾನಿ
ಇತ್ತೀಚೆಗೆ ನರೇಂದ್ರ ಮೋದಿ ಬೆಳಗಾವಿ ಮತ್ತು ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಬೆಳಗಾವಿಯಲ್ಲಿ ಬೃಹತ್ ರ್ಯಾಲಿ ನಡೆಸಿದರೆ, ಶಿವಮೊಗ್ಗದ ಹೊರಭಾಗದಲ್ಲಿ ನಿರ್ಮಾಣವಾಗಿದ್ದ ನೂತನ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದರು. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು ರಾಜ್ಯಕ್ಕೆ ಕೇಂದ್ರ ನಾಯಕರ ಭೇಟಿ ಹೆಚ್ಚಲಿದೆ.