ಮಂಡ್ಯ: ಹೊಸ ವರ್ಷಾಚರಣೆ ನೆಪದಲ್ಲಿ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವ ಸಾಧ್ಯತೆಯಿದ್ದು ಅಹಿತಕರ ಘಟನೆಗಳನ್ನು ತಡೆಯುವ ದೃಷ್ಟಿಯಿಂದ ಇಂದು ಮತ್ತು ನಾಳೆ ಜಿಲ್ಲೆಯ ಕೆಲವು ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಆಗಮನವನ್ನು ನಿಷೇಧಿಸಲಾಗಿದೆ ಎಂದು ಡಿಸಿ ಡಾ. ಎಂ.ವಿ.ವೆಂಕಟೇಶ್ ತಿಳಿಸಿದರು.
ಶ್ರೀರಂಗಪಟ್ಟಣ ತಾಲೂಕಿನ ಬಲಮುರಿ, ಎಡಮುರಿ ಮತ್ತು ಕೆಆರ್‌ಎಸ್ ಹಿನ್ನೀರಿನ ಕಡೆ ಹಾಗೂ ಮಳವಳ್ಳಿ ತಾಲೂಕಿನ ಮುತ್ತತ್ತಿ ಪ್ರವಾಸಿ ತಾಣಕ್ಕೆ ಸಾರ್ವಜನಿಕರು ಮತ್ತು ಪ್ರವಾಸಿಗರು ಹೋಗುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೊಸ ವರ್ಷವೆಂದರೆ ಎಲ್ಲೆಡೆ ಸಂಭ್ರಮ, ಸಡಗರ ಹಾಗೂ ಯುವಜನರಂತೂ ಮೋಜು ಮಸ್ತಿಯಲ್ಲಿ ತೊಡಗುತ್ತಾರೆ. ಈ ಮಧ್ಯೆ ಕೊರೊನಾ ವೈರಸ್ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಲಂಡನ್‌ನಿಂದ ಜಿಲ್ಲೆಗೆ ಹಲವು ಮಂದಿ ಈಗಾಗಲೇ ಆಗಮಿಸಿದ್ದಾರೆ. ಈ ವೈರಸ್ ಹರಡುವಿಕೆ ತಡೆಯಲು ಜಿಲ್ಲಾಡಳಿತ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಅವರು ಹೇಳಿದರು.
ತಮ್ಮ ಮನೆ ಹಾಗೂ ಹೊಟೇಲ್‌ಗಳಲ್ಲಿ ಶಾಂತಿಯುತವಾಗಿ ವರ್ಷಾಚರಣೆಗೆ ಯಾವುದೇ ನಿರ್ಬಂಧವಿಲ್ಲ. ಬೆಂಗಳೂರು ಹಾಗೂ ಹೊರ ಪ್ರದೇಶದಿಂದ ಬಂದು ಮಧ್ಯರಾತ್ರಿ ವೇಳೆ ಕಾನೂನು ಸುವ್ಯವಸ್ಥೆ ಹಾಳುಮಾಡುವುದಕ್ಕೆ ಅವಕಾಶವಿಲ್ಲ. ಪೊಲೀಸ್ ಇಲಾಖೆಯಿಂದ ರಾತ್ರಿಯಿಡೀ ಗಸ್ತು ನಡೆಸಲು ಸೂಚನೆ ನೀಡಲಾಗಿದೆ ಎಂದರು.
ಜಿಲ್ಲಾ ವ್ಯಾಪ್ತಿಯಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಹೆಚ್ಚಿನ ಜನರು ಮೃತಪಟ್ಟಿರುವುದು ವರದಿಯಾಗಿದೆ. ಇದೀಗ ಹೊಸ ವರ್ಷದ ಸೆಲಬ್ರೇಷನ್ ನೆಪದಲ್ಲಿ ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಸಾಧ್ಯತೆಯಿದೆ. ಈ ಕಾರಣದಿಂದಾಗಿ ಅಹಿತಕರ ಘಟನೆಗಳು ಸಂಭವಿಸುವುದನ್ನು ತಡೆಯುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.