ಮಂಡ್ಯ: ಪಠ್ಯ ಪುಸ್ತಕದಿಂದ ಟಿಪ್ಪು ಇತಿಹಾಸ ಕೈಬಿಡುವ ವಿಚಾರ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಸರ್ಕಾರದ ನಿರ್ಧಾರ ಮೈಸೂರು ಭಾಗದ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಟಿಪ್ಪು-ಹೈದರಾಲಿ ಇಲ್ಲದೆ ಮೈಸೂರು ಇತಿಹಾಸವಿಲ್ಲ. ಅವರಿಬ್ಬರೂ ಬರದಿದ್ದರೆ ಮೈಸೂರು ಇತಿಹಾಸ ಸಂಪೂರ್ಣವಾಗಲ್ಲ. ರಾಜಕೀಯ ಸೇಡು ತೀರಿಸಿಕೊಳ್ಳಲು ಬಿಜೆಪಿ ಟಿಪ್ಪು ಹೆಸರನ್ನು ಕೈ ಬಿಡುವ ನಿರ್ಧಾರಕ್ಕೆ ಬಂದಿದೆ. ಬಿಜೆಪಿ ಪಕ್ಷ ಟಿಪ್ಪುವಿನ ಚರಿತ್ರೆಯನ್ನು ತಿರುಚುವ ಕೆಲಸ ಮಾಡ್ತಿದೆ. ಚರಿತ್ರೆಯನ್ನು ಹೇಗಿದೆಯೋ ಹಾಗೆಯೇ ಬೋಧಿಸಬೇಕೇ ಹೊರತು ತಿರುಚುವ ಕೆಲಸ ಮಾಡಬಾರದು ಎಂದು ಸರ್ಕಾರದ ನಿಲುವಿನ ವಿರುದ್ಧ ಗರಂ ಆದರು.
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಇತಿಹಾಸ ಎಷ್ಟು ಸರಿ, ಎಷ್ಟು ಸರಿಯಿಲ್ಲ ಅನ್ನೋದು ಯಾರಿಗೂ ಸಂಪೂರ್ಣವಾಗಿ ಗೊತ್ತಿರಲ್ಲ. ಈ ರೀತಿಯ ನಿರ್ಧಾರ ತೆಗೆದುಕೊಳ್ಳುವಾಗ ಎಲ್ಲರ ಜೊತೆ ಚರ್ಚಿಸಬೇಕು. ಏಕಪಕ್ಷೀಯವಾಗಿ ನಿರ್ಧಾರ ತಪ್ಪಾಗುತ್ತದೆ ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದರು.