ಮಂಡ್ಯ: ಯಾರೇ ಎದುರಾದರೂ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ನಾನಿಟ್ಟಿರುವ ಹೆಜ್ಜೆಯನ್ನು ಹಿಂದಿಡುವ ಪ್ರಶ್ನೆಯೇ ಇಲ್ಲವೆಂದು ಸಂಸದೆ ಸುಮಲತಾ ಅಂಬರೀಶ್ ಫೇಸ್‌ಬುಕ್‌ನಲ್ಲಿ ನೇರವಾಗಿ ಹೇಳಿದ್ದಾರೆ.
ಸಕ್ಕರೆ ನಾಡಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಸಂಬಂಧ ಯಾರೇ ಅಡ್ಡಗಾಲು ಹಾಕಿದರೂ ನಾನು ಹೆದರುವುದಿಲ್ಲ. ನನ್ನ ನಡೆ ಸತ್ಯದ ಕಡೆ ಮಾತ್ರ. ಅದು ಎಷ್ಟೇ ಕಷ್ಟವಾದರೂ ಸರಿ. ನೀವು ನನ್ನನ್ನು ಗೆಲ್ಲಿಸಿ ಕಳಿಸಿದ್ದು ಸತ್ಯದ ಪರವಾಗಿ ಧ್ವನಿ ಎತ್ತಲು ಎಂದಿದ್ದಾರೆ.
ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಪಟ್ಟಭದ್ರ ಹಿತಾಸಕ್ತಿಗಳ ನೂರು ದಾಳಕ್ಕೂ ನಾನು ಹಿಂಜರಿಯೋಲ್ಲ ಎಂದು ಸುಮಲತಾ ಗುಡುಗಿದ್ದಾರೆ. ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರದಲ್ಲಿ ನಡೆದಿರುವ ಜಿಲೆಟಿನ್ ಸ್ಫೋಟದಿಂದ ಕೆಲವರು ಮೃತಪಟ್ಟಿದ್ದಾರೆ. ಈ ರೀತಿ ನನ್ನ ಜಿಲ್ಲೆಯಲ್ಲಿ ಆಗಬಾರದು, ಅನಧಿಕೃತವಾಗಿ ಜಿಲೆಟಿನ್ ಬಳಸುವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.