ಮಂಡ್ಯ: ಕಳೆದೊಂದು ವಾರದ ಹಿಂದೆ ಬ್ರಿಟನ್‌ನಿಂದ ಬಂದು ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಆರೋಗ್ಯ ಇಲಾಖೆ ಪತ್ತೆ ಹಚ್ಚಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಮಂಚೇಗೌಡ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಕೆಯಿಂದ ಬಂದಿದ್ದ 20 ಜನರ ಪೈಕಿ 18 ಜನರ ಕೋವಿಡ್ ರಿಪೋರ್ಟ್ ನೆಗೆಟಿವ್ ಬಂದಿತ್ತು. ಓರ್ವ ಐರ್ಲೆಂಡ್‌ಗೆ ವಾಪಾಸ್ಸಾಗಿದ್ದಾರೆ. ಮತ್ತೊಬ್ಬ ವ್ಯಕ್ತಿಯ ವಿಳಾಸ ಸಿಕ್ಕಿರಲಿಲ್ಲ. ವಿಳಾಸ ಪತ್ತೆ ಹಚ್ಚಲು ಜಿಲ್ಲಾಡಳಿತ ರಾಜ್ಯ ಸರ್ಕಾರದ ಮೊರೆ ಹೋಗಿತ್ತು. ಆತನನ್ನು ಕೊನೆಗೂ ಹುಡುಕಿ ಟೆಸ್ಟ್ ಮಾಡಲಾಗಿದೆ ಎಂದರು.
ರಾಜ್ಯ ಆರೋಗ್ಯ ಇಲಾಖೆ ಆ ವ್ಯಕ್ತಿಯ ಕೋವಿಡ್ ಪರೀಕ್ಷೆ ಮಾಡಿದ್ದು, ಟೆಸ್ಟ್‌ನಲ್ಲಿ ನೆಗೆಟಿವ್ ರಿಪೋರ್ಟ್ ಬಂದಿದೆ. ಹೀಗಾಗಿ ಸಕ್ಕರೆ ನಾಡಿನಲ್ಲಿ ಸದ್ಯದ ಮಟ್ಟಿಗೆ ಬ್ರಿಟನ್ ವೈರಸ್ ಭೀತಿ ಇಲ್ಲ ಎಂದರು.