ಮಂಡ್ಯ: ಸಿಎಂ ಯಡಿಯೂರಪ್ಪ ಪರಿಹಾರ ಘೋಷಣೆ ಕೇವಲ ದಾಖಲೆಯಲ್ಲೇ ಉಳಿದಿದ್ದು, ಕೆರೆಯಲ್ಲಿ ಜೀವ ಕಳೆದುಕೊಂಡ ಏಳು ಮಂದಿ ಕುಟುಂಬಸ್ಥರಿಗೆ ಘೋಷಣೆ ಮಾಡಿರುವ ಪರಿಹಾರ ಇನ್ನೂ ಸಿಗದೆ ಕಣ್ಣೀರಲ್ಲೇ ಜೀವನ ಸಾಗಿಸುವಂತಾಗಿದೆ.
ನಾಗಮಂಗಲ ತಾಲೂಕಿನಲ್ಲಿ ಐವರು ಕೆರೆಯಲ್ಲಿ ಮುಳುಗಿ ಸಾವಿಗೀಡಾದಗಿದ್ದರು. ಅದೇ ದಿನ ಮತ್ತೊಂದು ಪ್ರಕರಣದಲ್ಲಿ ಕೆ.ಆರ್.ಪೇಟೆ ತಾಲೂಕಿನ ಹುಳಿ ಗಂಗನಹಳ್ಳಿಯ ಕೆರೆಯಲ್ಲಿ ನಡೆದ ದುರಂತದಲ್ಲಿ ಇಬ್ಬರು ಸಾವಿಗೀಡಾಗಿದ್ದರು. ವಿಚಾರ ತಿಳಿದ ಸಿಎಂ ಯಡಿಯೂರಪ್ಪ ಎರಡೂ ಕುಟುಂಬಕ್ಕೆ 23 ಲಕ್ಷ ರೂಪಾಯಿ ಪರಿಹಾರವನ್ನು ತುರ್ತಾಗಿ ಬಿಡುಗಡೆಗೊಳಿಸಲು ಸೂಚಿಸಿ ಆದೇಶ ಹೊರಡಿಸಿದ್ದರು. ಆದರೆ ಆದೇಶ ಇನ್ನೂ ಕಡತದಲ್ಲೇ ಉಳಿದುಕೊಂಡಿದೆ. ದುರಂತದಲ್ಲಿ ಸಾವಿಗೀಡಾದವರ ಕುಟುಂಬಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎನ್ನಲಾಗಿದೆ.
ಎರಡು ತಿಂಗಳು ಕಳೆದರೂ ಪರಿಹಾರದ ಹಣ ಬಂದಿಲ್ಲವೆಂದು ಕುಟುಂಬಸ್ಥರು ಹೇಳಿದ್ದಾರೆ. ಚೋಳಸಮುದ್ರ ಗ್ರಾಮದ ನರಸಿಂಹಯ್ಯರ ಪತ್ನಿ ಗೀತಾ, ಮಕ್ಕಳಾದ ಸವಿತಾ ಮತ್ತು ಸೌಮ್ಯ ಗ್ರಾಮದ ಸಣ್ಣಪ್ಪನ ಕಟ್ಟೆಯಲ್ಲಿ ಹಸುವನ್ನು ತೊಳೆಯಲು ಹೋಗಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವಿಗೀಡಾಗಿದ್ದರು. ಅದೇ ದಿನ ಬೆಳ್ಳೂರು ಹೋಬಳಿಯ ಚೋಳಸಂದ್ರ ಗ್ರಾಮದ ರಶ್ಮಿ ಹಾಗೂ ಇಂಚರ ಗ್ರಾಮದ ಕಟ್ಟೆಯ ಬಳಿ ಬಟ್ಟೆ ತೊಳೆಯಲು ಹೋಗಿ ನೀರಿಗೆ ಬಿದ್ದು ಸಾವನ್ನಪ್ಪಿದರು.
ಮತ್ತೊಂದು ಪ್ರಕರಣದಲ್ಲಿ ಕೆ.ಆರ್.ಪೇಟೆ ತಾಲೂಕಿನ ಹುಳಿ ಗಂಗನಹಳ್ಳಿಯ ಅಭಿಷೇಕ್ ಮತ್ತು ಕುಮಾರ್ ಹಸು ತೊಳೆಯಲು ಹೋಗಿ ಕೆರೆಯಲ್ಲಿ ಮುಳುಗಿ ಸಾವಿಗೀಡಾಗಿದ್ದರು. ಘಟನೆ ವಿಚಾರ ತಿಳಿದ ಸಿಎಂ ಯಡಿಯೂರಪ್ಪ 23 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದರು. ಆದರೆ ಪರಿಹಾರದ ಹಣ ಮೃತರ ಕುಟುಂಬಗಳ ಸದಸ್ಯರಿಗೆ ತಲುಪಿಲ್ಲ.