ಮಂಡ್ಯ : ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಚಾಗಿ ಪೆಲಿಕಾನ್ ಪಕ್ಷಿಗಳು ಸಾವನಪ್ಪುತ್ತಿವೆ. ಇಂದು ಕೂಡ ಜಿಲ್ಲೆಯ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರಿನಲ್ಲಿ ಪೆಲಿಕಾನ್ ಪಕ್ಷಿ ಮೇಲಿಂದ ಬಿದ್ದು ಮೃತಪಟ್ಟಿದೆ. ಇವುಗಳ ಸರಣಿ ಸಾವಿಗೆ ಜಂತುಹುಳುಗಳೇ ಕಾರಣವೆಂಬುದು ಮೇಲ್ನೋಟಕ್ಕೆ ದೃಢಪಟ್ಟಿದೆ.
ಕಳೆದ ನವೆಂಬರ್‌ನಿಂದೀಚೆಗೆ 6 ಪೆಲಿಕಾನ್‌ಗಳು ಮೃತಪಟ್ಟಿವೆ. ಆದಾಗ್ಯೂ ಹೆಚ್ಚಿನ ಪರೀಕ್ಷೆಗೆ ಉತ್ತರಪ್ರದೇಶದಲ್ಲಿರುವ ಇಂಡಿಯನ್ ವೆಟರ್ನರಿ ರಿಸರ್ಚ್ ಇನ್‌ಸ್ಟಿಟ್ಯೂಟ್ ಹಾಗೂ ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸಕಾನ್ ಸಂಸ್ಥೆಗೆ ಮಾದರಿ ಕಳುಹಿಸಲಾಗಿದೆ. ಹಕ್ಕಿಜ್ವರದ ಭೀತಿಯಂತೂ ಇಲ್ಲ ಎಂದು ಸ್ಥಳೀಯ ಪಶು ವೈದ್ಯ ಡಾ.ಸತೀಶ್ ಸ್ಪಷ್ಟಪಡಿಸಿದ್ದಾರೆ.
ವಿದೇಶದಿಂದ ಸಂತಾನಕ್ಕಾಗಿ ಗ್ರಾಮಕ್ಕೆ ಆಗಮಿಸುವ ಪೆಲಿಕಾನ್‌ಗಳು, ಮರಗಳ ಮೇಲೆ ಗೂಡು ಕಟ್ಟಿ ವಾಸಿಸುತ್ತವೆ. ಕಳೆದ 4 ವರ್ಷಗಳಿಂದಲೂ ಮರದ ಮೇಲಿಂದ ಉರುಳಿ ಬಿದ್ದು ಮೃತಪಡುತ್ತಿವೆ. ಈವರೆಗೆ 125ಕ್ಕೂ ಹೆಚ್ಚು ಪೆಲಿಕಾನ್‌ಗಳು ಮೃತಪಟ್ಟಿವೆ.