ಮಂಡ್ಯ: ರಾಜ್ಯದಲ್ಲಿ 2ನೇ ಹಂತದ ಕೊರೊನಾ ಆರ್ಭಟ ಶುರುವಾಗುತ್ತಿರುವ ಬೆನ್ನಲ್ಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಆದರೆ ಹಣದಾಸೆಗೆ ಕೆಲ ಖಾಸಗಿ ಶಾಲೆಗಳು ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶ್ರೀರಂಗಪಟ್ಟಣದ ಕೇಂಬ್ರಿಡ್ಜ್ ಶಾಲೆಯಲ್ಲಿ 1 ರಿಂದ 5ನೇ ತರಗತಿ ಮಕ್ಕಳಿಗೆ ತರಗತಿ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಇತ್ತೀಚೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು 1ರಿಂದ 5ನೇ ತರಗತಿ ಮಕ್ಕಳನ್ನು ಶಾಲೆಗೆ ಕರೆಸಿಕೊಂಡರೆ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದರು. ಆದರೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕೇಂಬ್ರಿಡ್ಜ್ ಶಾಲೆಯಲ್ಲಿ 1ನೇ ತರಗತಿ ಮಕ್ಕಳನ್ನೂ ಶಾಲೆಗೆ ಕರೆಸಿಕೊಳ್ಳುವ ಜೊತೆಗೆ ಕೊರೊನಾ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಲಾಗುತ್ತಿದೆ.
ಈಗಾಗಲೇ ಪರ ವಿರೋಧದ ನಡುವೆ 6ನೇ ತರಗತಿ ಮೇಲ್ಪಟ್ಟ ಮಕ್ಕಳಿಗೆ ತರಗತಿ ನಡೆಸಲು ಅವಕಾಶ ನೀಡಿರುವ ರಾಜ್ಯ ಸರ್ಕಾರ ಕೊರೊನಾ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದೆ. ಆದರೆ ಕೆಲವು ಖಾಸಗಿ ಶಾಲೆಗಳು ಸರ್ಕಾರದ ಆದೇಶಗಳಿಗೆ ಕಿಮ್ಮತ್ತು ನೀಡದೆ ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡುವುದಲ್ಲದೇ ಶೇ 100ರಷ್ಟು ಫೀಸ್ ಕಟ್ಟಲು ಪೋಷಕರನ್ನು ಪೀಡಿಸುತ್ತಿವೆ.
ಈ ಕೆಂಬ್ರಿಡ್ಜ್ ಶಾಲಾ ಆಡಳಿತ ಮಂಡಳಿ ಕೂಡ ಫೀಸ್ ಕಟ್ಟುವಂತೆ ಪೋಷಕರನ್ನು ಪೀಡಿಸುತ್ತಿದೆ ಎನ್ನಲಾಗಿದೆ. ನಿಗದಿತ ಶುಲ್ಕ ಪಾವತಿಸದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕೂರಿಸದೆ ಕ್ಲಾಸ್ ರೂಂನಿಂದ ಹೊರಗೆ ನಿಲ್ಲಿಸುತ್ತಿದ್ದು, ಕಡೆಯ 15 ನಿಮಿಷ ಇದ್ದಾಗ ಪರೀಕ್ಷೆಗೆ ಅವಕಾಶ ನೀಡಿ ಅಮಾನವೀಯವಾಗಿ ವರ್ತನೆ ಮಾಡಲಾಗುತ್ತಿದೆ.
ಇನ್ನು 1ರಿಂದ 5 ತರಗತಿಗಳನ್ನು ಅನಧಿಕೃತವಾಗಿ ನಡೆಸುತ್ತಿರುವ ಜೊತೆಗೆ ಮಕ್ಕಳೊಂದಿಗೆ ಅಮಾನವೀಯವಾಗಿ ವರ್ತನೆ ಮಾಡುತ್ತಿರುವ ಕೆಂಬ್ರಿಡ್ಜ್ ಶಾಲೆಗೆ ನೋಟೀಸ್ ನೀಡಲಾಗುವುದು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶ್ರೀರಂಗಪಟ್ಟಣ ಬಿಇಓ ಅನಂತ ರಾಜು ತಿಳಿಸಿದ್ದಾರೆ.