ಮಂಡ್ಯ: "ರಾಜಕೀಯ ಮಾಡುವುದಿದ್ದರೆ ಮಂಡ್ಯದಲ್ಲಿಯೇ ಮಾಡ್ತೀನಿ, ಮಂಡ್ಯ ಬಿಡುವ ಪ್ರಶ್ನೆಯೇ ಇಲ್ಲ. ಮಂಡ್ಯದ ಮೇಲೆ ಇಷ್ಟ ಇದ್ರೆ ಇಲ್ಲಿಗೆ ಬಂದು ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಲಿ" ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ನಿಖಿಲ್ ಹೇಳಿಕೆ ಕೇಳಿ ನನಗೆ ನಗು ಬಂತು. ಈಗ ರಾಮನಗರದಿಂದ ಸ್ಪರ್ಧೆ ಮಾಡಲು ರೆಡಿಯಾಗ್ತಿರೋದು ಯಾರು ಅಂತಾ ಗೊತ್ತಿದೆ. ನಾನು ಈಗಾಗಲೇ ಹೇಳಿದ್ದೀನಿ, ರಾಜಕೀಯ ಮಾಡುವುದಿದ್ದರೆ ಮಂಡ್ಯದಲ್ಲೇ ಮಾಡುತ್ತೇನೆ. ಈ ಹಿಂದೆ ಬೆಂಗಳೂರಿಂದ ಆಫರ್ ಇತ್ತು. ಅದನ್ನು ಆಗಲೇ ರಿಜೆಕ್ಟ್ ಮಾಡಿದ್ದೆ. ಈಗ ನನಗೆ ಮಂಡ್ಯದ ರಾಜಕೀಯದಲ್ಲಿ ಅಸ್ತಿತ್ವವಿದೆ. ಯಾಕೆ ಬೇರೆ ಕ್ಷೇತ್ರಕ್ಕೆ ಹೋಗಲಿ" ಎಂದು ಹೇಳಿದರು.
"ಅವರು ಕೊಟ್ಟಿರುವ ಹೇಳಿಕೆ ಅಪ್ರಬುದ್ದ. ನಾನು ಹೇಳಿದ್ದನ್ನು ಅವರು ಸರಿಯಾಗಿ ಕೇಳಿಸಿಕೊಂಡಿಲ್ಲ ಅನ್ನಿಸುತ್ತಿದೆ. ಯಾರೋ ಇಂತಹ ಹೇಳಿಕೆ ಕೊಡಿ ಅಂತಾ ಕೊಡಿಸುತ್ತಿದ್ದಾರೇನೋ. ಮಂಡ್ಯದಲ್ಲಿ ಏನು ನಡೆಯುತ್ತಿದೆ ಅನ್ನೋದು ಅವರಿಗೆ ಗೊತ್ತಿಲ್ಲವೇನೋ. ಅವರಿಗೆ ಮಂಡ್ಯದ ಮೇಲೆ ಇಷ್ಟವಿದ್ದರೆ ಬಂದು ಸ್ಪರ್ಧೆ ಮಾಡಲಿ. ಯಾರು ಇಲ್ಲಿ ಬಂದು ಚುನಾವಣೆಗೆ ನಿಲ್ಲುತ್ತಾರೆ, ಯಾರನ್ನು ಸೋಲಿಸಬೇಕು ಎಂಬ ಲೆಕ್ಕಾಚಾರದಲ್ಲಿ ನಾನು ಚುನಾವಣೆಗೆ ನಿಲ್ಲುವುದಿಲ್ಲ" ಎಂದು ತಿಳಿಸಿದರು.
"ಮೊದಲು ಅವರ ತಂದೆ, ತಾಯಿ, ಕುಟುಂಬದವರು ಎಷ್ಟೆಷ್ಟು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಾರೆ ಎಂಬುದನ್ನು ಪಟ್ಟಿ ಇಟ್ಟುಕೊಂಡು ಮಾತನಾಡಲಿ. ಜೆಡಿಎಸ್ ನಾಯಕರು ಹೇಳುವುದೊಂದು, ಮಾಡುವುದೊಂದು, ನಡೆದುಕೊಳ್ಳುವುದೇ ಒಂದು. ಯಾರೋ ಒಬ್ಬರು ಶಾಸಕರು ನಿಖಿಲ್ 2.5 ಲಕ್ಷ ಮತಗಳ ಅಂತರದಿಂದ ಗೆಲ್ಲದಿದ್ರೆ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದಿದ್ದರು. ಈಗ ಅವರೇನು ಮಾಡಿದ್ದಾರೆ.? ಈ ತರದ ಮಾತೆಲ್ಲ ಸುಮ್ಮನೆ. ಹೀಗೆ ಮಾತಾಡಿ ಮಾತಾಡಿ ಅವರ ಮಾತನ್ನು ಜನರು ನಂಬುತ್ತಿಲ್ಲ" ಎಂದು ತಿರುಗೇಟು ಕೊಟ್ಟರು.
ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?: ಮಂಡ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ ಎಂದು ಮಂಡ್ಯ ಸಂಸದೆ ಸುಮಲತಾ ಇತ್ತೀಚೆಗೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ನಿಖಿಲ್ ಕುಮಾರಸ್ವಾಮಿ, "ಸುಮಲತಾ ಅಂಬರೀಶ್ ಅವರು 2024 ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನಿಂದ ಸ್ಪರ್ಧಿಸುತ್ತಾರೆ. ಹೊಂದಾಣಿಕೆ ರಾಜಕಾರಣ ಎನ್ನುವುದು ಮಂಡ್ಯದಲ್ಲಿ 2019 ರ ಲೋಕಸಭಾ ಚುನಾವಣೆಯಲ್ಲಿಯೇ ಪ್ರಾರಂಭವಾಗಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಯಾರು ಹೊಂದಾಣಿಕೆ ರಾಜಕಾರಣ ಮಾಡಿದರು ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಹೊಂದಾಣಿಕೆ ಕುರಿತು ಸಂಸದರಿಗೆ ಮಾತನಾಡುವ ನೈತಿಕ ಹಕ್ಕು ಉಳಿದಿಲ್ಲ" ಎಂದಿದ್ದರು.
ಇದನ್ನೂ ಓದಿ: 2024ರ ಚುನಾವಣೆಯಲ್ಲಿ ಬೆಂಗಳೂರಿನಿಂದ ಸುಮಲತಾ ಅಂಬರೀಶ್ ಸ್ಪರ್ಧೆ: ನಿಖಿಲ್ ಕುಮಾರಸ್ವಾಮಿ