ಮಂಡ್ಯ: ಸುಪ್ರೀಂಕೋರ್ಟ್ ಈ ಬಾರಿ ರಿಲೀಫ್ ಕೊಡುವ ವಿಶ್ವಾಸ ಇತ್ತು. ಆದರೆ, ಅದು ಮತ್ತೆ ಸುಳ್ಳಾಗಿದೆ. ಏಕೆ ಪದೆ ಪದೇ ಹೀಗೆ ಆಗ್ತಿದೆ ಗೊತ್ತಿಲ್ಲ. ಸುಪ್ರೀಂ ಆದೇಶ ಪಾಲಿಸುವ ಅನಿವಾರ್ಯತೆ ಇದೆ. ಈ ಪರಿಸ್ಥಿತಿಯಲ್ಲಿ ರಾಜಕೀಯ ಮಾತನಾಡಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.
ಮಂಡ್ಯದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ಯಾರು ಮಧ್ಯಪ್ರವೇಶ ಮಾಡಲು ಆಗಲ್ಲ. ಆದರೆ, ಅನ್ಯಾಯ ಆದ ರೈತರಿಗೆ ಏನು ಉತ್ತರ ಕೊಡುವುದು, ಏನು ಕ್ರಮ ತೆಗೆದುಕೊಳ್ಳಬೇಕು ಎನ್ನುವುದನ್ನು ನಿರ್ಧಾರ ಮಾಡಬೇಕಿದೆ. ಅಧಿಕಾರಿಗಳಿಂದಲೂ ಮಾಹಿತಿ ಪಡೆದಿದ್ದೇನೆ. ಅಧಿಕಾರಿಗಳ ಮಾತು ಕೇಳಿದ್ರೆ ಮತ್ತಷ್ಟು ಆತಂಕ ಆಗುತ್ತದೆ. ಕೃಷಿಗೆ ಇರಲಿ, ಭವಿಷ್ಯದಲ್ಲಿ ಕುಡಿಯುವ ನೀರಿಗೂ ತೊಂದರೆ ಆಗುತ್ತದೆ. ಈ ಪರಿಸ್ಥಿತಿಯಲ್ಲಿ ಏನು ಮಾಡಬೇಕು? ಮುಖ್ಯಮಂತ್ರಿಗಳು ಕರೆದಿದ್ದ ಮೂರು ಸಭೆಗೂ ನಾನು ಹೋಗಿದ್ದೇನೆ. ಇದ್ದ ಅನುಮಾನಗಳಿಗೆ ಕ್ಲಾರಿಟಿ ಕೇಳಿದ್ದೇವೆ. ಆದರೆ, ಸದ್ಯಕ್ಕೆ ಮಳೆಯೊಂದೆ ಇದಕ್ಕೆ ಪರಿಹಾರ ಎಂಬಂತಾಗಿದೆ ಎಂದರು.
ಸುಪ್ರೀಂ ಮುಂದೆ ವಾಸ್ತವ ಸಂಗತಿ ಮನವರಿಕೆ ಮಾಡಲು ನಾವು ವಿಫಲವಾಗ್ತಿದ್ದೇವೆ. ಬೇರೆ ರಾಜ್ಯದ ಅಧಿಕಾರಿಗಳು ಪ್ರಾಧಿಕಾರದ ಸಭೆಗೆ ಹೋಗ್ತಾರೆ. ಆದರೆ, ನಮ್ಮ ಅಧಿಕಾರಿಗಳು ವಿಡಿಯೋ ಕಾಲ್ ಮೂಲಕ ಭಾಗವಹಿಸುತ್ತಾರೆ. ಹೀಗೆ ಮಾಡಿದ್ರೆ ಅದರ ಪರಿಣಾಮ ಏನಿರುತ್ತದೆ? ಪ್ರಯತ್ನ ಪ್ರಾಮಾಣಿಕವಾಗಿ ಮಾಡಬೇಕು. ಇಂತಹ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಕೆಆರ್ಎಸ್ನಲ್ಲಿ 20TMC ನೀರಿದೆ. ಅದರಲ್ಲಿ 4TMC ಡೆಡ್ ಸ್ಟೋರೇಜ್. ಉಳಿದ ನೀರಲ್ಲಿ ತಮಿಳುನಾಡಿಗೂ ನೀರು, ನಮಗೂ ನೀರು ಉಳಿಸಿಕೊಳ್ಳಬೇಕು. ಮುಂದಿನ ವಾರ ಮಳೆ ಮುನ್ಸೂಚನೆ ಇದೆ. ಅದೊಂದೇ ನಮ್ಮ ಮುಂದಿರುವ ಮಾರ್ಗ. ಮಳೆಯಾದರೆ ಸಮಸ್ಯೆ ಸ್ವಲ್ಪ ದೂರವಾಗಬಹುದು. ಡ್ಯಾಂಗಳ ಪರಿಶೀಲನೆಗೆ ಕೇಂದ್ರ ಸಚಿವರು ಭರವಸೆ ಕೊಟ್ಟಿದ್ದಾರೆ ಎಂದರು.
ಕುಡಿಯುವ ನೀರು ಬಿಟ್ರೆ ಕೃಷಿಗೆ ನೀರು ಬಿಡಲು ಆಗಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೈತರ ಪರ ನಿಲ್ಲಬೇಕು. ರೈತರು ಈಗಾಗಲೇ ಪ್ರತಿಭಟನೆ ಮಾಡ್ತಿದ್ದಾರೆ. ಕುಡಿಯಲು ಮಾತ್ರ ನೀರು ಕೊಟ್ರೆ ಕೃಷಿಗೆ ಸಿಗದೇ ಇರಬಹುದು. ಹಾಗಾಗಿ ಸರ್ಕಾರ ಕೂಡಲೇ ರೈತರಿಗೆ ಪರಿಹಾರ ಕೊಡಬೇಕು. ರೈತರು ಕೂಡ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಬೇಕು. ಆಗ ಇಂತಹ ಸಂದರ್ಭದಲ್ಲಿ ನೆರವಾಗುತ್ತದೆ. ಆದರೆ, ದುರಾದೃಷ್ಟವಶಾತ್ ಬಹಳಷ್ಟು ರೈತರು ವಿಮೆಗೆ ಮುಂದೆ ಬರಲ್ಲ. ಮಳೆ ಬಂದಾಗ ಕಷ್ಟದ ದಿನಗಳನ್ನು ಮರೆತುಬಿಡ್ತಾರೆ. ಭವಿಷ್ಯದಲ್ಲಿ ಯಾವ ಯಾವ ಸಮಸ್ಯೆಗಳು ಎದುರಾಗುತ್ತವೆ ಅನ್ನೋದು ಗೊತ್ತಾಗುವುದಿಲ್ಲ. ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂದು ಅವರು ತಿಳಿಸಿದರು.
ಕೇಂದ್ರ ಇರಲಿ, ರಾಜ್ಯ ಸರ್ಕಾರ ಇರಲಿ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲು ಆಗಲ್ಲ. ಆದರೆ, ಎರಡು ರಾಜ್ಯಗಳು ಪರಸ್ಪರ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬಹುದು. ಲೀಗಲ್ ಆ್ಯಕ್ಷನ್ ಆಗಲ್ಲ ಅಂತ ಅಂದ್ರೆ ಇದೊಂದು ದಾರಿ. ನೀರು ಕೊಡಲ್ಲ ಎನ್ನಲಾಗಲ್ಲ. ಆದರೆ, ನಮ್ಮ ಅಗತ್ಯತೆಯನ್ನು ನೋಡಬೇಕು. ಶತ್ರು ರಾಷ್ಟ್ರಗಳ ಜೊತೆ ಮಾತನಾಡಿ ಬಗೆಹರಿಸಿಕೊಳ್ತಾರೆ. ಅದೇ ರೀತಿ ತಮಿಳುನಾಡು ಜೊತೆ ಏಕೆ ಮಾತನಾಡಲು ಆಗಲ್ಲ? ಈ ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನು ಸರ್ಕಾರ ಮಾಡಬೇಕು. ಕಾವೇರಿ ವಿಚಾರ ಮಾತನಾಡಲು ಪಾರ್ಲಿಮೆಂಟ್‌ನಲ್ಲಿ ಅವಕಾಶ ಕೇಳಿದ್ದೇನೆ. ರೈತರ ಸಮಸ್ಯೆ ಬಗ್ಗೆ ಆದ್ಯತೆ ಮೇರೆಗೆ ಮಾತನಾಡಿದ್ದೇನೆ. ಅಂಬರೀಶ್ ಕಾವೇರಿ ವಿಚಾರದಲ್ಲಿ ರಾಜೀನಾಮೆ ನೀಡಿದ್ದರು. ಅದೇ ರೀತಿ ನನ್ನ ವ್ಯಾಪ್ತಿಯಲ್ಲಿ ನಾನು ಏನು ಮಾಡಬಹುದು ಮಾಡ್ತೀನಿ. ರೈತರ ಸಲಹೆಗಳನ್ನು ಕೇಳ್ತೀನಿ. ರಾಜಕೀಯ ಬೆರೆಸದೆ ಈ ವಿಚಾರದಲ್ಲಿ ಸರ್ಕಾರದ ಜೊತೆ ನಿಲ್ಲಲು ಸಿದ್ಧ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.
ಇದನ್ನೂ ಓದಿ: ಕಾವೇರಿ ವಿವಾದ: ನೀರಿನ ವಿಚಾರದಲ್ಲಿ ರಾಜಕೀಯ ಇಲ್ಲ- ಸಚಿವ ಜಿ ಪರಮೇಶ್ವರ್